ದಲಿತರಿಗೆ ಕೊಟ್ಟ ಭೂಮಿ ಬಿಟ್ಟು ಕೊಡಿ

| Published : May 05 2025, 12:50 AM IST

ಸಾರಾಂಶ

ದಲಿತರಿಗೆ ಮಂಜೂರಾದ ಭೂಮಿಯನ್ನು ಮಾಲಿಕರು ಅಕ್ರಮವಾಗಿ ಸೋಲಾರ್ ಕಂಪನಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಭೂ ಒಡೆತನ ಯೋಜನೆಯಡಿಯಲ್ಲಿ ಜಮೀನು ಪಡೆದ ರೈತರಿಗೆ ಅನ್ಯಾಯವಾಗಿದೆ.

ಕುಕನೂರು: ತಾಲೂಕಿನ ತಳಕಲ್ ಗ್ರಾಮದ ದಲಿತ ಸಮುದಾಯದ ರೈತರಿಗೆ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಯಡಿ ಮಂಜೂರಾದ ಬಡ ದಲಿತ ಕುಟುಂಬಗಳಿಗೆ ಭೂಮಿ ಬಿಟ್ಟುಕೊಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ದಲಿತ ಕುಟುಂಬದವರು ಜಮೀನಿನಲ್ಲಿಯೇ ಶನಿವಾರ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಹಲಗೆ ಬಾರಿಸಿ ನ್ಯಾಯ ಕೊಡಿ ಎಂದು ಪ್ರತಿಭಟಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ನಿಂಗಪ್ಪ ಬೆಣಕಲ್ ಮಾತನಾಡಿ, ದಲಿತರಿಗೆ ಮಂಜೂರಾದ ಭೂಮಿಯನ್ನು ಮಾಲಿಕರು ಅಕ್ರಮವಾಗಿ ಸೋಲಾರ್ ಕಂಪನಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಭೂ ಒಡೆತನ ಯೋಜನೆಯಡಿಯಲ್ಲಿ ಜಮೀನು ಪಡೆದ ರೈತರಿಗೆ ಅನ್ಯಾಯವಾಗಿದೆ. ಈಗಿರುವ ಸಮಸ್ಯೆ ಸರಿಪಡಿಸಿ ಸದರಿ ರೈತರ ಹೆಸರಿಗೆ ಪಹಣಿ ಪತ್ರ ಕೊಟ್ಟು ಜಮೀನು ಬಿಟ್ಟು ಕೊಡಬೇಕು. ಸುಮಾರು ೨೦ ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನನ್ನು ನಂಬಿಕೊಂಡಿರುವ ಕುಟುಂಬ ಬೀದಿಗೆ ಬಂದಿದೆ. ಕವಲೂರು ಗ್ರಾಮ ಸೀಮಾದ ಸರ್ವೆ ನಂ.೬೯೬ ರಲ್ಲಿ ೨೦೦೭-೦೮ ನೇ ವರ್ಷದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಭೂಮಿ ಒಡೆತನ ಯೋಜನೆಯಡಿ ತಳಕಲ್ ಗ್ರಾಮದ ಈರವ್ವ ಮಾದರ, ಶಿವವ್ವ ಹನುಮಂತಪ್ಪ, ಶಾಂತವ್ವ ಹುಚ್ಚಪ್ಪ ಮತ್ತು ಕಾಶವ್ವ ಗುಡದಪ್ಪ ಎನ್ನುವ ಫಲಾನುಭವಿಗಳಿಗೆ ತಲಾ ಎರಡು ಎಕರೆಯಂತೆ ಸರ್ಕಾರ ಭೂಮಿ ಮಂಜೂರು ಮಾಡಿರುತ್ತದೆ. ಅಲ್ಲಿಂದ ಇಲ್ಲಿಯವರಿಗೆ ಫಲಾನುಭವಿಗಳು ಜಮೀನನ್ನು ಉಳುಮೆ ಮಾಡಿಕೊಂಡು ಬಂದಿರುತ್ತಾರೆ. ಸದ್ಯ ಭೂ ಮಾಲೀಕ ಫಲಾನುಭವಿಗಳಿಗೆ ಭೂಮಿ ಬಿಟ್ಟುಕೊಡದೆ ಸರ್ಕಾರದಿಂದ ಬಂದ ಹಣ ಪಡೆದು, ಅಕ್ರಮ ಮಾರ್ಗದಲ್ಲಿ ಸೋಲಾರ್ ಕಂಪನಿಗೆ ಭೂಮಿ ನೀಡಿದ್ದಾರೆ. ಕೂಡಲೇ ಭೂ ಮಾಲೀಕರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಯಲ್ಲಪ್ಪ ಮ್ಯಾಗಳಕೇರಿ, ಸುಂಕಪ್ಪ ಮೀಸಿ, ಕರಿಯಪ್ಪ ಮಣ್ಣಿನವರ, ಶ್ರೀಕಾಂತ ಹೊಸಮನಿ, ಗಾಳೇಶ್ ಮಕ್ಕಳ್ಳಿ, ಕಾಶಮ್ಮ ಕೋಳೂರು, ಮುದಿಯಪ್ಪ ಛಲವಾದಿ, ಮಾರುತಿ ದೊಡ್ಡಮನಿ, ಶಾಂತವ್ವ ಪೂಜಾರ, ಈರವ್ವ ಕುಮಳಿ, ಶಿವವ್ವ ಛಲವಾದಿ ಇತರರಿದ್ದರು.