ಸಾರಾಂಶ
- ಕಟ್ಟಡ ಪರವಾನಿಗೆ, ಬ್ಯಾಂಕ್ ಸಾಲ ಸಿಗುವಂತೆ ತಿದ್ದುಪಡಿ ತನ್ನಿ: ಪ್ರಸನ್ನಕುಮಾರ ಒತ್ತಾಯ
- - - ಕನ್ನಡಪ್ರಭ ವಾರ್ತೆ ದಾವಣಗೆರೆಕಂದಾಯ ನಿವೇಶನ, ಕಟ್ಟಡಕ್ಕೆ ಬಿ ಖಾತಾ ನೀಡುವುದಾಗಿ ಬಡವರಿಗೆ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಆ ಮೂಲಕ ಜನರನ್ನು ಮೂರ್ಖರನ್ನಾಗಿಸುವ ಯೋಜನೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನರಿಗೆ ಸಮಸ್ಯೆ, ಸಂಕಷ್ಟ ತಪ್ಪಿದ್ದಲ್ಲ ಎಂದು ಬಿಜೆಪಿ ಯುವ ಮುಖಂಡ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಕೆ.ಪ್ರಸನ್ನಕುಮಾರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೆವಿನ್ಯೂ ನಿವೇಶನಗಳನ್ನು ಬಿ ಖಾತಾ ರಿಜಿಸ್ಟರ್‌ನಲ್ಲಿ ನಮೂದಿಸಿ, ನಮೂನೆ 2ಎ ಅಥವಾ ನಮೂನೆ 3ಎ ನೀಡುತ್ತಿದ್ದಾರೆ. ಇದರಿಂದ ಸ್ವತ್ತಿನ ವರ್ಗೀಕರಣ ಕಾಲಂನಲ್ಲಿ ಅನಧಿಕೃತ ಎಂದೇ ನಮೂದಿಸುತ್ತಿದ್ದು, ಇದರಿಂದಾಗಿ ಅಂತಹ ಕಂದಾಯ ನಿವೇಶನಕ್ಕಾಗಲೀ, ಕಟ್ಟಡಕ್ಕಾಗಲೀ ಕಟ್ಟಡ ಪರವಾನಿಗೆ, ಬ್ಯಾಂಕ್ ಸಾಲ ಸಹ ಸಿಗುವುದಿಲ್ಲ ಎಂದರು.ತೆರಿಗೆ ವಸೂಲಿ ಹುನ್ನಾರದ ಅರಿವಿಲ್ಲದ ಕಂದಾಯ ನಿವೇಶನದಾರರು, ಕಟ್ಟಡ ಮಾಲೀಕರು ತಮ್ಮ ಆಸ್ತಿಗಳನ್ನು ಬಿ ಖಾತಾ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದರಿಂದ ಅನುಕೂಲವಾಗುತ್ತಿಲ್ಲ. ನಮೂನೆ-2ಎ ಮತ್ತು ನಮೂನೆ-3ಎ ನಲ್ಲಿ ಆಸ್ತಿ ವರ್ಗೀಕರಣ ಕಾಲಂನಲ್ಲಿ ಅಧಿಕೃತ ಎಂಬುದಾಗಿ ನಮೂದಿಸಬೇಕು. ಈ ನಿವೇಶನಗಳಿಗೆ ಕಟ್ಟಡ ಪರವಾನಿಗೆ ನೀಡಲು ಅಗತ್ಯ ತಿದ್ದುಪಡಿ ತರಬೇಕು. ಬ್ಯಾಂಕ್‌ಗಳಲ್ಲಿ ಮನೆ ಕಟ್ಟಲು ಸಾಲ ನೀಡಲು ನಿವೇಶನಗಳನ್ನು ಅಧಿಕೃತವೆಂದು ಆದೇಶಿಸಬೇಕು. ಇಲ್ಲವಾದರೆ ಜನರಿಗೆ ದಾರಿ ತಪ್ಪಿಸಿ, ತೆರಿಗೆ ಸಂಗ್ರಹಿಸುತ್ತಿರುವ ಬಿ ಖಾತಾ ಆಂದೋಲನವನ್ನೇ ಕೈ ಬಿಡಬೇಕು ಎಂದು ಕೆ.ಪ್ರಸನ್ನಕುಮಾರ ಒತ್ತಾಯಿಸಿದರು.
ಮಾಜಿ ಮೇಯರ್ ಎಸ್.ಟಿ.ವೀರೇಶ, ಪಾಲಿಕೆ ಮಾಜಿ ಸದಸ್ಯ ಆರ್.ಶಿವಾನಂದ ಮಾತನಾಡಿದರು. ಪಕ್ಷದ ಮುಖಂಡರಾದ ಸುರೇಶ ಗಂಡಗಾಳೆ, ಜಯಪ್ರಕಾಶ, ಲಿಂಗರಾಜ ಇತರರು ಇದ್ದರು.- - - -12ಕೆಡಿವಿಜಿ62.ಜೆಪಿಜಿ:
ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಮುಖಂಡ ಕೆ.ಪ್ರಸನ್ನಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.