ಸಾರಾಂಶ
ಮಕ್ಕಳಿಗೆ ಮಾನವೀಯ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ವೆಂಕಟೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳಿಗೆ ಮಾನವೀಯ ಹಾಗೂ ಮೌಲ್ಯಯುತ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಆರ್‌ಟಿಇ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ‘ಶಾಲೆಯಲ್ಲಿದೆ ಶಿಕ್ಷಣದ ಜೊತೆ ರಕ್ಷಣೆ’ ಕುರಿತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಳ ಹಕ್ಕುಗಳ ಕುರಿತು ಸಾಕಷ್ಟು ಕಾನೂನುಗಳು, ಕಾಯ್ದೆಗಳು ಇದ್ದರೂ ಸಹ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ, ದೌರ್ಜನ್ಯಗಳು ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದರು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನಿಗಾವಹಿಸಬೇಕು. ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಪ್ಪಿಸಲು ಹತ್ತಿರದಲ್ಲಿಯೇ ಶಾಲಾ ಕಾಲೇಜುಗಳು ಇರಬೇಕು. ಇಲ್ಲದಿದ್ದಲ್ಲಿ ಸಾರಿಗೆ ಸಂಪರ್ಕವಾದರೂ ಸಮಪರ್ಕವಾಗಿರಬೇಕು ಎಂದು ತಿಳಿಸಿದರು. ಡಯಟ್ ಪ್ರಾಂಶುಪಾಲ ಎಂ.ಚಂದ್ರಕಾಂತ್ ಮಾತನಾಡಿ, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಶಿಶುವಿಹಾರ, ಅಂಗನವಾಡಿ, ಮಧ್ಯಾಹ್ನದ ಬಿಸಿ ಊಟ, ಹಾಲು ವಿತರಣೆ, ಬೈಸಿಕಲ್ ವಿತರಣೆ, ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅವಕಾಶ. ಹೀಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯಲು ಮುಂದಾಗಬೇಕು ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಈರಸ್ವಾಮಿ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಅತೀ ಮುಖ್ಯವಾಗಿದೆ. ಶಿಕ್ಷಣದಿಂದ ಮಾತ್ರ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದರು. ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಆರ್‌ಎಂಎಸ್‌ಎ ಸೌಮ್ಯ ಪೊನ್ನಪ್ಪ ಮಾತನಾಡಿ, ಮಕ್ಕಳಲ್ಲಿ ಹೆದರಿಕೆ, ಸಂಕೋಚ ಮನೋಭಾವ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ಡಿವೈಪಿಸಿ ಎಸ್‌ಎಸ್‌ಕೆ ಎಂ.ಕೃಷ್ಣಪ್ಪ, ಸುಮತಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೊಡ್ಡೇಗೌಡ, ಭಾಗ್ಯಮ್ಮ, ರವಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಬಿಆರ್‌ಸಿ, ಸಿಆರ್‌ಪಿ ಇತರರು ಇದ್ದರು. ಸಂವಾದ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಪೊಲೀಸ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಗ್ರ ಗಿರಿಜನ ಅಭಿವೃದ್ಧಿ ಹೀಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ನಗರದ ಸಂತ ಮೈಕಲರ ಶಾಲೆ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ‘ಮಕ್ಕಳಿಂದ ಅಹವಾಲು ಸ್ವೀಕಾರ ಹಾಗೂ ಮಕ್ಕಳ ಶಿಕ್ಷಣದ ಜೊತೆಗೆ ರಕ್ಷಣೆ ಕುರಿತು ಸಂವಾದ’ ಕಾರ್ಯಕ್ರಮವು ಮಂಗಳವಾರ ನಡೆಯಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಡಿವೈಎಸ್‌ಪಿ ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ, ಐಟಿಡಿಪಿ ಇಲಾಖೆಯ ಅಧಿಕಾರಿ ಎಸ್.ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಸೌಮ್ಯ ಪೊನ್ನಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೋಹನ್ ಕುಮಾರ್, ವ್ಯವಸ್ಥಾಪಕರಾದ ಶಿವಶಂಕರ, ಗುರುರಾಜ್ ಇತರರು ಪಾಲ್ಗೊಂಡಿದ್ದರು.ನಗರದ ಸರ್ಕಾರಿ ಪ್ರೌಢಶಾಲೆ, ಸಂತ ಮೈಕಲರ, ಸಂತ ಜೋಸೆಫರ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಕೇಂದ್ರೀಯ ವಿದ್ಯಾಲಯ, ಕೊಡಗು ವಿದ್ಯಾಲಯ ಸೇರಿದಂತೆ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡರು. ಡಿವೈಎಸ್‌ಪಿ ಮಹೇಶ್ ಕುಮಾರ್ ಮಾತನಾಡಿ, ಮೊಬೈಲ್ ಬಳಕೆಯಿಂದ ಒಳಿತು ಕೆಡುಕು ಎರಡು ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು. ಆದರೂ ಮೋಸ, ವಂಚನೆಗೆ ತುತ್ತಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು.