ಸರ್ಕಾರದ ಸುತ್ತೋಲೆಯಂತೆ ಜಮೀನಿಗೆ ದಾರಿಕೊಡಿ

| Published : Jun 24 2024, 01:32 AM IST

ಸಾರಾಂಶ

ಜಮೀನು ದಾರಿಗಾಗಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಕಡೆಗಣಿಸುತ್ತಿರುವ ತಹಸೀಲ್ದಾರ್ ಅವರಿಗೆ ದಾರಿ ಮಾಡಿಕೊಡಲು ಸೂಚನೆ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಮೀನು ದಾರಿಗಾಗಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಕಡೆಗಣಿಸುತ್ತಿರುವ ತಹಸೀಲ್ದಾರ್‌ ಅವರಿಗೆ ದಾರಿ ಮಾಡಿಕೊಡಲು ಸೂಚನೆ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯದ ರೈತರು ಜಮೀನುಗಳಿಗೆ ದಾರಿ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಈಗಾಗಲೇ ಸುತ್ತೋಲೆ ಹೊರಡಿಸಿದೆ. ದಾರಿ ಇಲ್ಲದ ಜಮೀನುಗಳಿಗೆ ಆ್ಯಕ್ಟ್ 1882 ಸಿಆರ್‌ಪಿಸಿ 1973 ಸೆಕ್ಷನ್ 147 ಪ್ರಕಾರ ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿ ಒಂದು ವರ್ಷ ಸಮೀಪಿಸುತ್ತಿದ್ದರೂ ತಹಸೀಲ್ದಾರ್‌ ಅವರು ಸರ್ಕಾರದ ಸುತ್ತೋಲೆಯಂತೆ ದಾರಿ ಮಾಡಿಕೊಟ್ಟ ಉದಾಹರಣೆ ಇಲ್ಲ. ಕರ್ನಾಟಕ ಭೂ ಕಂದಾಯ ಅಧಿನಿಯಮ 1966 ನಿಯಮ 59ರ ಅಡಿಯಲ್ಲಿ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಿದ್ದರೂ ತಹಸೀಲ್ದಾರ್‌ಗಳು ದಾರಿಮಾಡಿಕೊಡುತ್ತಿಲ್ಲ. ದಾರಿಗಾಗಿ ರೈತರು ಅರ್ಜಿ ಸಲ್ಲಿಸಿದರೆ ಅನವಶ್ಯಕವಾಗಿ ವಿಳಂಬ ನೀತಿ ಅನುಸರಿಸಿ ಸರ್ವೆ ಇಲಾಖೆಗೆ ಪತ್ರ ಬರೆಯುತ್ತಿದ್ದಾರೆ. ದಾರಿ ಇದೆಯೋ ಇಲ್ಲವೋ ಎಂಬುವುದನ್ನು ಸರ್ವೆ ಮಾಡಿ ವರದಿ ಕೊಡಿ ಎಂದು ಎಡಿಎಲ್‌ಆರ್ ಇವರಿಗೆ ಪತ್ರ ಬರೆಯುತ್ತಿದ್ದಾರೆ. ಭೂ ಮಾಪಕರು ಅಳತೆ ಮಾಡಿ ದಾರಿ ಇಲ್ಲವೆಂದು ತಹಸೀಲ್ದಾರ್‌ ಅವರಿಗೆ ಪತ್ರ ಬರೆಯುತ್ತಾರೆ. ಅದರಂತೆ ತಹಸೀಲ್ದಾರ್‌ ಅವರು ಕೂಡ ದಾರಿಗಾಗಿ ಅರ್ಜಿ ಸಲ್ಲಿಸಿದ ರೈತರಿಗೆ ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲ ಎಂದು ಹಿಂಬರಹ ಕೊಡುತ್ತಾರೆ. ಸರ್ಕಾರ ಸುತ್ತೋಲೆ ಹೊರಡಿಸಿರುವುದು ದಾರಿ ಇಲ್ಲದ ಜಮೀನುಗಳಿಗೆ ದಾರಿ ಮಾಡಿಕೊಡಬೇಕೆಂದು ಅನುಭೋಗದ ಹಕ್ಕಿನ ಪ್ರಕಾರ ಸ್ಪಷ್ಟ ಸುತ್ತೋಲೆಯನ್ನು ಹೊರಡಿಸಿದೆ ಎಂದರು.

ನಕ್ಷೆಯಲ್ಲಿ ದಾರಿ ಇದ್ದರೆ ತಹಸೀಲ್ದಾರರಿಗೆ ಹೇಳುವ ಅವಶ್ಯಕತೆ ಏನು? ಬಹುತೇಕ ನಕ್ಷೆಗಳಲ್ಲಿ ಜಮೀನುಗಳಿಗೆ ಹೋಗಲು ದಾರಿಗಳ ಗುರುತೇ ಇಲ್ಲ. ಬ್ರಿಟಿಷರ ಕಾಲದಿಂದಲೂ ನಕ್ಷೆಯಲ್ಲಿ ದಾರಿ ಗುರುತು ಮಾಡಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಹಲವಾರು ರೈತರು ದಾರಿ ಕೊಡುತ್ತಿಲ್ಲ. ಸರ್ಕಾರ ಸುತ್ತೋಲೆ ಪ್ರಕಾರ ದಾರಿಮಾಡಿ ಕೊಡದಿದ್ದರೆ ಹಿಂಬರಹ ಕೊಡಲಿ, ಅದಕ್ಕೂ ಕೂಡ ತಹಸೀಲ್ದಾರರು ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ ದಾರಿ ಸಮಸ್ಯೆ ಬಗೆ ಹರಿಸಲು ಅಧಿಕಾರಿಗಳಿಗೆ ಮನಸ್ಸಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಹಳ್ಳಿಗಳಲ್ಲಿ ದಾರಿಗಾಗಿ ರೈತರ ಮಧ್ಯೆ ಹೊಡೆದಾಟ ಮುಂದುವರೆದು ಕೊಲೆಗಳು ಆಗುವ ಸಂಭವವಿದೆ. ಈಗಾಗಲೇ ಕೆಲವೊಂದು ಭಾಗಗಳಲ್ಲಿ ಕೊಲೆಗಳು ಕೂಡ ನಡೆದಿವೆ. ಇಂತಹ ಗಂಭೀರವಾದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಸ್ಪಷ್ಟವಾದ ಆದೇಶವನ್ನು ಮತ್ತೊಮ್ಮೆ ಹೊರಡಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಗಪ್ಪ ಮನಗೂಳಿ, ರೇವಣೆಪ್ಪ ಮನಗೂಳಿ, ಶರಣಪ್ಪ ಮನಗೂಳಿ, ಬಸವರಾಜ ಕುಂಬಾರ, ಮಾಚಪ್ಪ ಹೊರ್ತಿ, ಮೈಬೂಬ ಅವಟಿ, ಸಿದ್ದಪ್ಪ ಕಲ್ಲಬೀಳಗಿ, ಪ್ರಭು ಬಿಸ್ತವಾಡ ಮುಂತಾದವರು ಉಪಸ್ಥಿತರಿದ್ದರು.