ಸಾರಾಂಶ
ಕೊಪ್ಪಳ: ಕಾರ್ಮಿಕ ವರ್ಗದ ಶ್ರಮಕ್ಕೆ ಗೌರವ ನೀಡಬೇಕು ಹಾಗೂ ಅವರಿಗಿರುವ ಹಕ್ಕುಗಳನ್ನು ದೊರಕಿಸಿ ಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಹೇಳಿದರು.
ಬಹದ್ದೂರಬಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ, ಬಹದ್ದೂರ ಬಂಡಿಯ ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರಮಿಕರ ಬೆವರಿನ ಬೆಲೆಗೆ ತಕ್ಕ ಗೌರವ ಸಿಗಬೇಕು.ಶ್ರಮಿಕ ಮತ್ತು ಮಾಲೀಕನ ಸಂಬಂಧ ತಂದೆ,ಮಕ್ಕಳ ರೀತಿಯಲ್ಲಿರಬೇಕು. ಕಾರ್ಮಿಕರಿಗೆ ತಾರತಮ್ಯ ಮಾಡದೆ ಕೆಳಹಂತದ ಕಾರ್ಮಿಕ ಇರಲಿ ಅಥವಾ ಮೇಲ್ಮಟ್ಟದ ಅಧಿಕಾರಿ ಇರಲಿ, ಎಲ್ಲರ ಕೆಲಸಕ್ಕೆ ಗೌರವ ದೊರಕಬೇಕು ಎಂದರು.
ಕಾರ್ಮಿಕರ ಸಮಸ್ಯೆಗಳಿದ್ದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಿ ಎಂದು ತಿಳಿಸಿದ ಅವರು, ಕಾರ್ಮಿಕರಿಗಾಗಿ ಇರುವ ಕಾನೂನುಗಳ ಕುರಿತು ಮಾಹಿತಿ ನೀಡಿದರು.ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದವರು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಬಹದ್ದೂರಬಂಡಿ ಗ್ರಾಮೀಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಮೆಹಬೂಬ್ ಮಣ್ಣೂರ ಮಾತನಾಡಿ, ಕಾರ್ಮಿಕ ಇಲಾಖೆ ಅಧಿಕಾರಿಗಳ ಸ್ಪಂದನೆ ಉತ್ತಮವಾಗಿದ್ದು, ಎಲ್ಲ ಸೌಲಭ್ಯ ದೊರೆಯುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.ಕಾರ್ಮಿಕ ನಿರೀಕ್ಷಕಿ ಮಂಜುಳಾ, ಕಾರ್ಮಿಕ ದಿನಾಚರಣೆ ವಿಶೇಷತೆ ಕುರಿತು ತಿಳಿಸಿದರು. ಒಕ್ಕೂಟದ ಅಧ್ಯಕ್ಷ ರಮೇಶ ಘೋರ್ಪಡೆ, ಇಲಾಖೆಯ ಸೌಲಭ್ಯಗಳ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ, ಕಾರ್ಮಿಕರಿಗೆ ಹುಟ್ಟಿನಿಂದ ಸಾವಿನ ವರೆಗೂ ಸೌಲಭ್ಯಗಳಿವೆ. ಹೆರಿಗೆ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಮದುವೆ ಸಹಾಯಧನ, ಶೈಕ್ಷಣಿಕ ಸಹಾಯಧನ, ಪಿಂಚಣಿ ಸೌಲಭ್ಯ, ಅಂತ್ಯಕ್ರಿಯೆ ಹಾಗೂ ಮರಣ ಸಹಾಯಧನ ಸೌಲಭ್ಯ ಇವೆ. ಅಸಂಘಟಿತ ಕಾರ್ಮಿಕರಿಗೂ ಕೂಡಾ ಇಲಾಖೆಯಲ್ಲಿ ಸೌಲಭ್ಯಗಳಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಂಘದ ಪದಾಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ನಿರೂಪಿಸಿದರು. ಎಕ್ಸಿಕ್ಯೂಟಿವ್ ಹೇಮಂತ್ ಸಿಂಗ್ ಸ್ವಾಗತಿಸಿದರು ಹಾಗೂ ದಾದಾಪೀರ ರವರು ವಂದಿಸಿದರು.