ಮಕ್ಕಳಿಗೆ ತಪ್ಪದೇ ವಿದ್ಯಾಭ್ಯಾಸ ಕೊಡಿಸಿ: ನ್ಯಾ. ಈಶ್ವರ್‌

| Published : Jul 04 2025, 11:48 PM IST

ಮಕ್ಕಳಿಗೆ ತಪ್ಪದೇ ವಿದ್ಯಾಭ್ಯಾಸ ಕೊಡಿಸಿ: ನ್ಯಾ. ಈಶ್ವರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ವಿಶ್ವವಿದ್ಯಾನಿಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಕಾರ್ಯಕ್ರಮಕ್ಕೆ ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಳ್ಳರು ವಸ್ತುಗಳನ್ನು ಕಳ್ಳತನ ಮಾಡಬಹುದು. ಆದರೆ ವಿದ್ಯೆಯನ್ನು ಯಾರೂ ಸಹ ಕದಿಯಲು ಸಾಧ್ಯವಿಲ್ಲ. ಹಾಗಾಗಿ ಗ್ರಾಮಸ್ಥರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಹೇಳಿದರು.

ಚಾಮರಾಜನಗರ ವಿಶ್ವವಿದ್ಯಾನಿಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಕಾರ್ಯಕ್ರಮಕ್ಕೆ ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಇದು ಯುವ ಪೀಳಿಗೆಗೆ ವ್ಯಕ್ತಿತ್ವ ರೂಪಿಸುವ ಕಾರ್ಯಕ್ರಮವಾಗಿದೆ. ಎನ್.ಎಸ್.ಎಸ್ ಶಿಬಿರದಲ್ಲಿ ಗಾಮ್ರಗಳ ಸ್ವಚ್ಚತೆ ಮಾಡುವ ಜೊತೆಗೆ ಜಾಗೃತಿ ಜಾಥಾ ಏರ್ಪಡಿಸಿ ಗ್ರಾಮಸ್ಥರಿಗೆ, ಯುವಕರಿಗೆ ಉದ್ಯೋಗ ಸಮಸ್ಯೆ, ಮೌಢ್ಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

14 ವಯಸ್ಸಿನ ಒಳಗಿನ ಮಕ್ಕಳನ್ನು ದುಡಿಯಲು ಕಳಿಸದೇ ಶಾಲೆಗೆ ಕಳುಹಿಸಬೇಕು. ಬಾಲ್ಯ ವಿವಾಹವನ್ನು ಮಾಡಬೇಡಿ. ಗ್ರಾಮದ ಜನರು ತಮ್ಮ ಎಲ್ಲಾ ಸ್ಥಿರ ಆಸ್ತಿಯನ್ನು ನೊಂದಣಿ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಯಾವುದೇ ತರಹ ಖಾಲಿ ಚೆಕ್‌ಗಳನ್ನು ಯಾರಿಗೂ ಕೊಡದೇ ಭರ್ತಿ ಮಾಡಿಕೊಡಿ ಎಂದು ನ್ಯಾಯಾಧೀಶರು ಜನರಿಗೆ ಕಾನೂನು ಸಲಹೆ ನೀಡಿದರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ.ಆರ್ ಗಂಗಾಧರ್ ಮಾತನಾಡಿ, ಎನ್.ಎಸ್.ಎಸ್ ಶಿಬಿರ ಎಲ್ಲ ವಿದ್ಯಾರ್ಥಿಗಳು ಜಾತಿ, ಧರ್ಮ, ಭೇದ-ಭಾವ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಕಾರ್ಯಕ್ರಮವಾಗಿದೆ. ಗ್ರಾಮಸ್ಥರಿಗೆ ರಾತ್ರಿ ವೇಳೆ ನಾಟಕ ಪ್ರದರ್ಶನ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಂದು ಗ್ರಾಮಸ್ಥರಿಗೆ ಕಿವಿಮಾತು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಆರ್. ಮಹೇಶ್ ಅವರು, ವಿದ್ಯಾರ್ಥಿಗಳು ನಾಯಕತ್ವ ಗುಣ, ಉತ್ತಮ ಸಂಸ್ಕಾರ ಕೃತಜ್ಞತಾ ಭಾವವನ್ನು ಬೆಳೆಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕಿದೆ. ಪ್ರತಿಯೊಬ್ಬರು ಸಮಯವನ್ನು ಗೌರವಿಸಿ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಓದಿನತ್ತ ಗಮನಹರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಲರಾಜು ಮಾತನಾಡಿದರು. ಜ್ಯೋತಿಗೌಡನಪುರ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಶ್ರೀನಾಥ, ಹೊಂಡರಬಾಳು ಗ್ರಾಮಪಂಚಾಯಿತಿ ಸದಸ್ಯರಾದ ಲೋಕೇಶ್, ಹೊಂಡರಬಾಳು ಶಾಲಾ ಮುಖ್ಯ ಶಿಕ್ಷಕಿ ತುಳಸಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಕುಮಾರ್, ಆಶಾ ಕಾರ್ಯಕರ್ತೆ ಶಾಂತಮ್ಮ, ಗ್ರಾಮದ ಯಾಜಮಾನರಾದ ಶಿವಕುಮಾರ್, ರಮೇಶ್, ಸಿದ್ದರಾಜಗೌಡ ಉಪಸ್ಥಿತರಿದ್ದರು.