ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಲಾದ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ಇದೀಗ ರಾಜಧಾನಿಯ ಸಾರ್ವಜನಿಕರ ಸಭೆ ನಡೆಸಿ ಅಭಿಪ್ರಾಯ ಪಡೆಯುವುದಕ್ಕೆ ಮುಂದಾಗಿದೆ.
ಕಳೆದ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಂದ ಭಾರೀ ಆಕ್ಷೇಪಕ್ಕೆ ಎಡೆ ಮಾಡಿಕೊಟ್ಟ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಸಂಬಂಧಿಸಿದಂತೆ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿತ್ತು.ಸಮಿತಿಯು ಈಗಾಗಲೇ ಬರೋಬ್ಬರಿ 16 ಸಭೆಗಳನ್ನು ನಡೆಸಲಾಗಿದ್ದು, 1 ಪಾಲಿಕೆಗೆ ಎಷ್ಟು ವಾರ್ಡ್ ಇರಬೇಕು. ವಾರ್ಡ್‌ನಲ್ಲಿ ಎಷ್ಟು ಜನಸಂಖ್ಯೆ ಇರಬೇಕು. ಆಡಳಿತ ವಿನ್ಯಾಸ ರಚನೆ ಸೇರಿ ಕರಡು ವಿಧೇಯಕದಲ್ಲಿ ಪರಿಷ್ಕರಣೆಯ ಶಿಫಾರಸು ದಾಖಲಿಸಿಕೊಂಡಿದೆ. ಜತೆಗೆ, ಇದೀಗ ಪರಿಶೀಲನಾ ಸಮಿತಿಯ ಸದಸ್ಯರು ವಿಧೇಯಕದ ಬಗ್ಗೆ ಬೆಂಗಳೂರಿನ ನಾಗರಿಕರಿಂದ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಪಡೆಯುವುದಕ್ಕೆ ಮುಂದಾಗಿದೆ.
ನಗರದಲ್ಲಿ 6 ಸಭೆಗೆ ತೀರ್ಮಾನ:ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಪಡೆಯುವುದಕ್ಕೆ ಒಟ್ಟು 6 ಸಭೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಬಿಬಿಎಂಪಿಯ ವಲಯವಾರು ಸಭೆಗೆ ನಿರ್ಧರಿಸಲಾಗಿದೆ. ಮೊದಲ ಸಭೆ ಇದೇ ಫೆ.7 ರಂದು ಯಲಹಂಕ ಮತ್ತು ದಾಸರಹಳ್ಳಿ ವಲಯದ ಪ್ರತಿನಿಧಿಗಳೊಂದಿಗೆ ನಡೆಯಲಿದೆ. ಸಭೆಯಲ್ಲಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ಹಾಗೂ 12 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ. ಫೆ.10 ಹಾಗೂ ಫೆ.11 ರಂದು ಉಳಿದ ವಲಯಗಳ ಸಭೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.
---ಬಾಕ್ಸ್--ಬಜೆಟ್ ಅಧಿವೇಶದಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕಮಾರ್ಚ್‌ನಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಕರಡು ಪುನರ್ ಮಂಡನೆಗೆ ನಿರ್ಧಸಲಾಗಿದೆ. ಈಗಾಗಲೇ ಸಮಿತಿಯ ಸದಸ್ಯರ ನೇತೃತ್ವದಲ್ಲಿ ನಡೆಸಲಾದ ಚರ್ಚೆಗೆ ಅನುಗುಣವಾಗಿ ಕರಡು ವಿಧೇಯಕದಲ್ಲಿ ಸಾಕಷ್ಟು ಪರಿಷ್ಕರಣೆ ಮಾಡಲಾಗಿದೆ. ಇದೀಗ ಸಾರ್ವಜನಿಕರ ಅಭಿಪ್ರಾಯದ ವೇಳೆ ವ್ಯಕ್ತವಾಗುವ ಅಂಶಗಳನ್ನು ಇಟ್ಟುಕೊಂಡು ಅಗತ್ಯವಿದ್ದರೆ ಪರಿಷ್ಕರಣೆ ನಡೆಸಿ ಫೆ.21ರ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವುದಕ್ಕೆ ಪರಿಶೀಲನಾ ಸಮಿತಿ ತೀರ್ಮಾನಿಸಿದೆ.
--ಬಾಕ್ಸ್--ಏನಿದು ವಿಧೇಯಕ?ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶವನ್ನು ಸೇರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ, ಇದರಡಿ 1 ರಿಂದ 10 ಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕಳೆದ ಜುಲೈನಲ್ಲಿ ವಿಧಾನಸಭೆಯಲ್ಲಿ ಕರಡು ವಿಧೇಯಕ ಮಂಡಿಸಿದ್ದರು.ಈ ವೇಳೆ ವಿರೋಧ ಪಕ್ಷದ ಸದಸ್ಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ಸ್ಪೀಕರ್ ಯು.ಟಿ.ಖಾದರ್ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನೇತೃತ್ವದಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಿ ವರದಿ ನೀಡುವುದಕ್ಕೆ ಸೂಚಿಸಿತ್ತು. ಕಳೆದ ಆರು ತಿಂಗಳಿನಿಂದ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಫೆ.21ಕ್ಕೆ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದೆ. ಅದಕ್ಕಿಂತ ಮುನ್ನ ವರದಿ ಸಲ್ಲಿಸಬೇಕಿದೆ.--ಕೋಟ್--ಈಗಾಗಲೇ ಸಾಕಷ್ಟು ಸಭೆ ನಡೆಸಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ್ಕೆ ಸಂಬಂಧಿಸಿದಂತೆ ಹಲವು ಶಿಫಾರಸ್ಸುಗಳನ್ನು ವರದಿ ಮಾಡಲಾಗಿದ್ದು, ನಗರದ 6 ಕಡೆ ಸಾರ್ವಜನಿಕ ಸಭೆ ನಡೆಸಿ ಅಭಿಪ್ರಾಯ ಪಡೆದು ಅಂತಿಮ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಶೀಘ್ರದಲ್ಲಿ ಸಲ್ಲಿಸಲಾಗುವುದು. ಮುಂಬರುವ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ತಯಾರಿ ಮಾಡಲಾಗಿದೆ. - ರಿಜ್ವಾನ್ ಅರ್ಷದ್, ಅಧ್ಯಕ್ಷರು, ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿ