ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮುಡಾ ಪ್ರಕರಣದ ವಿವಾದಿತ ಜಮೀನು, ಭೂ ಪರಿವರ್ತನೆ ಕಾನೂನು ಅನುಸಾರ ಮಾಡಲಾಗಿದೆ ಎಂದು ಲೋಕಾಯುಕ್ತರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಎಂದು ಸಂಸದ ಜಿ.ಕುಮಾರನಾಯಕ ತಿಳಿಸಿದರು.ಮುಡಾ ವಿವಾದಿತ ಜಮೀನು ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ನನಗೆ 1 ಗಂಟೆಗೂ ಹೆಚ್ಚು ಸಮಯ ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ನಾನು 2002 ರಿಂದ 2005ರ ವರೆಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೆ. 1998ರಲ್ಲಿ ಭೂ ನೋಟಿಫಿಕೇಶನ್ ಆಗಿದೆ. ಅಂತಿಮ ನೋಟಿಫಿಕೇಶನ್ ಆದ ನಂತರ 45 ದಿನಗಳ ಬಳಿಕ ಡಿನೋಟಿಫಿಕೇಶನ್ ಆಗಿದೆ. ಭೂಮಿ ಒಡೆತನದ ರೈತನಿಗೆ ಮಾಲಿಕತ್ವ ಹೋಗುತ್ತದೆ. 6 ವರ್ಷಗಳ ನಂತರ ಜಿಲ್ಲಾಧಿಕಾರಿಯಿಂದ ಲೋಪವಾಗಿದೆ ಎಂದು ಆರೋಪಿಸಲಾಗಿತ್ತು. ಈ ಆರೋಪದಲ್ಲಿ ಹುರುಳಿಲ್ಲ. ಲೋಕಾಯುಕ್ತರು ವಿಚಾರಣೆ ವೇಳೆ ಎಲ್ಲಾ ಮಾಹಿತಿ ನೀಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಕಡತಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದೇನೆ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ವೇಗವಾಗಿ ನಡೆಯಲು ಸೈಟ್ ಕ್ಲಿಯರೆನ್ಸ್ ಮಾಡಿದ್ದು ಸಹಕಾರಿಯಾಗಿದೆ. ಕೆಕೆಆರ್ ಡಿಬಿ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನದಡಿ ವಿಮಾನ ನಿಲ್ದಾಣ ಪ್ರಕ್ರಿಯೆ ನಡೆಯಲಿದೆ. ಭೂ ಸ್ವಾಧೀನ, ಪರಿಹಾರ ಸೇರಿದಂತೆ ಎಲ್ಲಾ ವ್ಯವಸ್ಥೆ ನಿರ್ವಹಿಸಲು ಜಿಲ್ಲಾಧಿಕಾರಿ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.ವಿಮಾನ ನಿಲ್ದಾಣ ಪ್ರಕ್ರಿಯೆಗೆ ಸಚಿವ ಎನ್.ಎಸ್.ಬೋಸರಾಜು, ಉಸ್ತುವಾರಿ ಡಾ.ಶರಣಪ್ರಕಾಶ ಪಾಟೀಲ ಹಾಗೂ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ನಿರಂತರವಾಗಿ ಶ್ರಮಿಸಿದ್ದಾರೆ ಎಂದೂ ತಿಳಿಸಿದರು.