ಅನ್ನದಾತ, ಯೋಧನಿಗೆ ಗೌರವಿಸುವ ಕಾರ್ಯವಾಗಲಿ: ಸರ್ಫಭೂಷಣ ದೇವರು

| Published : Jan 27 2025, 12:46 AM IST

ಅನ್ನದಾತ, ಯೋಧನಿಗೆ ಗೌರವಿಸುವ ಕಾರ್ಯವಾಗಲಿ: ಸರ್ಫಭೂಷಣ ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಗೋಳ ಪಟ್ಟಣದ ಲಿಂ. ಬಸವಣ್ಣಜ್ಜನವರ ಪುಣ್ಯ ಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಕಾರ್ಯಕ್ರಮದಲ್ಲಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್ ಹನಮಕ್ಕನವರ ಅವರಿಗೆ ಕಲ್ಯಾಣಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕುಂದಗೋಳ: ದೇಶಕ್ಕೆ ಅನ್ನ ಕೊಡುವ ರೈತ, ದೇಶದ ಗಡಿ ಕಾಯುವ ಯೋಧರಿಗೆ ಗೌರವಿಸುವ ಕಾರ್ಯವಾಗಬೇಕಿದೆ ಎಂದು ದುಮ್ಮವಾಡದ ಸರ್ಫಭೂಷಣ ದೇವರು ಹೇಳಿದರು.

ಭಾನುವಾರ ರಾತ್ರಿ ಪಟ್ಟಣದ ಲಿಂ. ಬಸವಣ್ಣಜ್ಜನವರ ಪುಣ್ಯ ಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಜೀವನದಲ್ಲಿ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂಬ ನಾಣ್ಣುಡಿಯಂತೆ ಶ್ರೀ ಸಿದ್ಧಾರೂಢರ ಜೀವನ ಚರಿತ್ರೆ, ಮದರ್ ಥೆರೆಸಾ, ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರ ಗುರು-ಶಿಷ್ಯರ ಹಾಗೂ ಸಂತ ಶಿಶುನಾಳ ಶರೀಫರು- ಗುರು ಗೋವಿಂದ ಭಟ್ಟರ ಗುರು- ಶಿಷ್ಯ ಸಂಬಂಧ ಕುರಿತು ಭಕ್ತರಿಗೆ ಆಶೀರ್ವಚನ ನೀಡಿದರು.

ಕೊಳ್ಳೂರಿನ ಮೃತ್ಯುಂಜಯ ದೇವರು ಮಾತನಾಡಿ, ಅಜ್ಞಾನದಲ್ಲಿ ಇರುವವರನ್ನು ಯಾರು ಬೆಳಕಿನೆಡೆಗೆ ಕೊಂಡೊಯ್ಯುತ್ತಾರೆಯೋ ಅವರನ್ನು ಗುರು ಎನ್ನುತ್ತಾರೆ. ಗುರುವಿನ ಮಾರ್ಗದರ್ಶನದಲ್ಲಿ ಮುಂದುವರೆದವನು ಜೀವನದಲ್ಲಿ ನಿಜವಾದ ಶಿಷ್ಯನಾಗಲು ಸಾಧ್ಯ ಎಂದರು.

ಕಲ್ಯಾಣಸಿರಿ ಪ್ರಶಸ್ತಿ ಪ್ರದಾನ

ಕಲ್ಯಾಣಸಿರಿ ಪ್ರಶಸ್ತಿ ಪಡೆದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್ ಹನಮಕ್ಕನವರ ಮಾತನಾಡಿ, ಮಠಗಳು ಸಮಾಜದ ಆಸ್ಪತ್ರೆಗಳಿದ್ದಂತೆ. ಆತ್ಮ, ಪರಮಾತ್ಮದ ಜತೆಗೆ ನಾವು- ನೀವು ಆರೋಗ್ಯವಾಗಿ ಸುಖ, ಸಂತೋಷದಿಂದ ಜೀವನ ಸಾಗುಸುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಈ ದೇಶದ ಸೈನಿಕರು. ಯೋಧರು ತಮ್ಮ ತಂದೆ-ತಾಯಿ, ಪತ್ನಿ, ಮಕ್ಕಳನ್ನು ಬಿಟ್ಟು ದೇಶಕ್ಕಾಗಿ ಹಗಲಿರುಳು ಗಡಿಯಲ್ಲಿ ದೇಶಕಾಯುವ ಕಾರ್ಯ ಮಾಡುತ್ತಾರೆ. ಇಂತಹ ಯೋಧರ ಕುಟುಂಬ ರಕ್ಷಣೆಗೆ ಆಯಾ ಗ್ರಾಮದ ಗುರು- ಹಿರಿಯರು ಜವಾಬ್ದಾರಿ ತೆಗೆದುಕೊಳ್ಳುವ ಕಾರ್ಯವಾಗಲಿ. ಇದು ಯೋಧರಿಗೆ ನಾವು ಮಾಡುವ ಚಿಕ್ಕ ಕೃತಜ್ಞತೆಯಾಗುತ್ತದೆ. ಈ ಕುರಿತು ಪ್ರತಿಯೊಬ್ಬರೂ ಕಾಳಜಿ ಹೊಂದುವಂತೆ ಕರೆ ನೀಡಿದರು.

ಬಟಗುರ್ಕಿಯ ಗದಿಗಯ್ಯ ದೇವರು ಆಶೀರ್ವಚನ ನೀಡಿದರು. ಈ ವೇಳೆ ಶಿವಾನಂದ ಮಠದ ಶಿವಾನಂದ ಶ್ರೀಗಳು, ಬಟಗುರ್ಕಿಯ ಗದಗಯ್ಯ ದೇವರು, ಜತ್ತನ ಮಹಾಂತ ದೇವರು, ಕೊಳ್ಳೂರಿನ ಮೃತ್ಯುಂಜಯ ದೇವರು, ಕುಮಾರ ಕುದರಗುಂಡ ಗವಾಯಿಗಳು, ಮಾಜಿ ಯೋಧರಾದ ಪರಶುರಾಮ ದಿವಾನದ, ಪರಮೇಶ್ವರ ಬೈರಪ್ಪನವರ, ಮುಖಂಡರಾದ ಗೌಡಪ್ಪಗೌಡ ಪಾಟೀಲ, ನಾಗರಾಜ ದೇಶಪಾಂಡೆ, ಮಾದೇವಪ್ಪ ಮುದಗಣ್ಣವರ, ರಮೇಶ ಬಾಳಿಕಾಯಿ, ಪರಶುರಾಮ ಕಲಾಲ, ಈಶ್ವರ ಗಂಗಾಯಿ ಸೇರಿದಂತೆ ಹಲವರಿದ್ದರು. ಬಸವರಾಜ ಹಿರೇಮಠ ಹಾಗೂ ಮೃತ್ಯುಂಜಯ ಜಡಿಮಠ ನಿರೂಪಿಸಿದರು.