ಸಾರಾಂಶ
ತುರುವೇಕೆರೆ: ಸರ್ಕಾರ ಮಧ್ಯಾಹ್ನನದ ಉಪಹಾರದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ, ಹಾಲು, ಚಿಕ್ಕಿ ಮತ್ತು ಬಾಳೆಹಣ್ಣುಗಳಂತಹ ಪೌಷ್ಟಿಕಾಂಶ ಆಹಾರ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಜಿಜೆಸಿಯ ಕುವೆಂಪು ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲ್ಲೂಕು ಪಂಚಾಯಿತಿ ಹಾಗು ಪಿ.ಎಂ ಪೋಷಣ್ ಯೋಜನೆಯಡಿ ವಾರದಲ್ಲಿ ೬ ದಿನವೂ ಪೌಷ್ಟಿಕಾಂಶ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯ ಸರ್ಕಾರ ಹಾಗೂ ಅಜೀಂ ಪ್ರೇಮ್‌ಜೀ ಫೌಂಡೇಷನ್ ವತಿಯಿಂದ ವಾರದಲ್ಲಿ ಆರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಕೊಡಲು ಉದ್ದೇಶಿಸಿರುವ ಕೋಳಿ ಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಕಡಲೆಕಾಯಿ ಚಿಕ್ಕಿ ವಿತರಣೆಯಿಂದ ತಾಲೂಕಿನಲ್ಲಿ ಸುಮಾರು ೧೦ ಸಾವಿರ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಸರ್ಕಾರ ನೀಡುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ತಿಂದು ವಿದ್ಯಾರ್ಥಿಗಳು ಸದೃಢ ಆರೋಗ್ಯ ಹೊಂದಬೇಕು. ಹಾಗೆಯೇ ಚನ್ನಾಗಿ ಓದಬೇಕು ಎಂದ ಅವರು, ಪೌಷ್ಟಿಕಾಂಶ ಆಹಾರ ಸೇವನೆ ಮಾಡುವುದರಿಂದ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢ ಆರೋಗ್ಯ ಪಡೆದು ಕಲಿಕೆಗೆ ಉತ್ತೇಜನವಾಗುತ್ತದೆ. ಹಾಗಾಗಿ ಒಳ್ಳೆಯ ವಿದ್ಯಾಭ್ಯಾಸ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತಾ, ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ೧ ರಿಂದ ೧೦ ನೇ ತರಗತಿವರೆಗಿನ ಮಕ್ಕಳಿಗೆ ಹಾಲು, ರಾಗಿ ಮಾಲ್ಟ್ ಮತ್ತು ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ, ಮೊಟ್ಟೆ ತಿನ್ನದ ಮಕ್ಕಳಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣುನ್ನು ವಿತರಿಸಲಾಗುತ್ತಿದೆ. ಸರ್ಕಾರದ ಜೊತೆಗೆ ಅಜೀಂ ಪ್ರೇಂಜಿಯವರು ಮೂರು ವರ್ಷಗಳ ಒಡಂಬಡಿಕೆಯಂತೆ ಭಾನುವಾರ ಹೊರತು ಪಡಿಸಿ ಆರೂ ದಿನವೂ ಪೌಷ್ಟಿಕಾಂಶ ಆಹಾರವನ್ನು ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಬಿ.ಇ.ಒ ಎನ್.ಸೋಮಶೇಖರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಂಗನಾಥ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಬಿಆರ್‌ಸಿ ಸುರೇಶ್, ಜಿಜೆಸಿ ಮುಖೋಪಧ್ಯಾಯರಾದ ವೆಂಕಟೇಶ್, ಶಿಕ್ಷಕಿ ಭಾರತಿ ಸೇರಿದಂತೆ ಹಲವರು ಇದ್ದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಸವಿತಾ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು. ಸಾವಿತ್ರಿ ವಂದಿಸಿದರು.