ಉತ್ತಮ ಶಿಕ್ಷಣ ಕೊಡಿಸುವುದು ಕೂಡ ದೇವರ ಕೆಲಸಕ್ಕೆ ಸಮ: ಸಚಿವ ಮಧು ಬಂಗಾರಪ್ಪ

| Published : Dec 17 2023, 01:46 AM IST

ಉತ್ತಮ ಶಿಕ್ಷಣ ಕೊಡಿಸುವುದು ಕೂಡ ದೇವರ ಕೆಲಸಕ್ಕೆ ಸಮ: ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯನವರು ಮೊದಲು ನನಗೆ ಬೇರೆ ಇಲಾಖೆ ನೀಡಿದ್ದರು. ಆದರೆ ನಾನು ಕಷ್ಟದ ಕೆಲಸ ನಿಭಾಯಿಸುತ್ತೇನೆಂಬ ಭರವಸೆಯಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮೊದಲು ನೀಡಿದ ಸಚಿವ ಸ್ಥಾನ ಬದಲಿಸಿ ನನಗೆ ಶಿಕ್ಷಣ ಇಲಾಖೆ ನೀಡಿದ್ದಾರೆ.

ಮುಂಡಗೋಡ: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಕೂಡ ದೇವರ ಮನೆಗೆ ಹೋಗಿ ಪೂಜೆ ಮಾಡುವಷ್ಟೆ ಶ್ರೇಷ್ಠವಾದ ಕೆಲಸವಾಗಿದೆ. ನಾನು ಶಿಕ್ಷಣ ಸಚಿವನಾದ ಮೇಲೆ ಆ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದೇನೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶನಿವಾರ ಸಂಜೆ ಪಟ್ಟಣದ ಹೊರವಲಯ ಲೊಯೋಲಾ ಕೇಂದ್ರಿಯ ವಿದ್ಯಾಲಯದಲ್ಲಿ ಲೊಯೋಲಾ ಸಂಸ್ಥೆಯ ೪೨ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕೆಂಬುವುದು ನಮ್ಮ ಮೂಲ ಉದ್ದೇಶವಾಗಿದೆ. ನಮ್ಮ ಇಲಾಖೆ ವ್ಯಾಪ್ತಿಗೆ ೭೬ ಸಾವಿರ ಶಾಲೆಗಳು ಹಾಗೂ ೩.೫ ಲಕ್ಷ ಶಿಕ್ಷಕರು ಬರುತ್ತಾರೆ. ೧.೨೦ ಕೋಟಿ ಮಕ್ಕಳು ನಮ್ಮ ಇಲಾಖೆಯಡಿಯಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಈ ಇಲಾಖೆಯಲ್ಲಿ ಕೆಲಸ ಮಾಡುವುದು ಕೂಡ ನಮ್ಮ ಪೂರ್ವಜನ್ಮದ ಪುಣ್ಯ. ಇತ್ತೀಚೆಗೆ ೧೩ ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಹಂತ ಹಂತವಾಗಿ ಶಿಕ್ಷಣ ಇಲಾಖೆಯಲ್ಲಿರುವ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಸಿಎಂ ಸಿದ್ದರಾಮಯ್ಯನವರು ಮೊದಲು ನನಗೆ ಬೇರೆ ಇಲಾಖೆ ನೀಡಿದ್ದರು. ಆದರೆ ನಾನು ಕಷ್ಟದ ಕೆಲಸ ನಿಭಾಯಿಸುತ್ತೇನೆಂಬ ಭರವಸೆಯಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮೊದಲು ನೀಡಿದ ಸಚಿವ ಸ್ಥಾನ ಬದಲಿಸಿ ನನಗೆ ಶಿಕ್ಷಣ ಇಲಾಖೆ ನೀಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ.ಅದನ್ನು ಪರಿಹರಿಸುವ ಕೆಲಸ ನಾನು ಮಾಡುತ್ತೇನೆ ಎಂದ ಅವರು, ಮಕ್ಕಳು ಸರ್ಕಾರಿ ಶಾಲೆಯತ್ತ ಮುಖ ಮಾಡಿ ಶಿಕ್ಷಣ ಪಡೆಯಲು ಆಸಕ್ತಿ ತೋರಬೇಕು. ಅಂತಹ ಮನೋಭಾವನೆಯಿಂದ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದುಳಿದ ತಾಲೂಕುಗಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಮುಂದಿನ ದಿನಗಳಲ್ಲಿ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ೫ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಗುರಿ ಹೊಂದಿದ್ದು, ಮುಂದಿನ ವರ್ಷ ೫೦೦ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಲು ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮತ್ತೆ ೩೦೦೦ ಪಬ್ಲಿಕ್ ಶಾಲೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ. ಇದರಿಂದ ಮಕ್ಕಳು ಎಲ್.ಕೆಜಿ ಯಿಂದ ಪಿಯುಸಿ ವರೆಗೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಬಹುದು.

ತಡವಾಗಿದ್ದಕ್ಕೆ ಕ್ಷಮೆ ಯಾಚಿಸಿದ ಸಚಿವರು:

ಸಂಜೆ ೫ ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು.ಆದರೆ ಬೆಂಗಳೂರನಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡು ತಡವಾಗಿದ್ದರಿಂದ ಬೆಂಗಳೂರ ಬಿಡುವುದೇ ಮಧ್ಯಾಹ್ನವಾಗಿದ್ದರಿಂದ ಬರುವುದು ವಿಳಂಭವಾಯಿತು. ಹಾಗಾಗಿ ಇಷ್ಟೊತ್ತು ಕಾದು ಕುಳಿತ ಮಕ್ಕಳಿಗೆ ಕ್ಷಮೆ ಯಾಚಿಸಿದರು.

ಮಾಜಿ ಶಾಸಕ ವಿ.ಎಸ್ ಪಾಟೀಲ, ಮಾಜಿ ಜಿ.ಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಶಿರಸಿ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕ ಪಿ.ಬಸವರಾಜ, ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ, ಗ್ರಾಪಂ ಅಧ್ಯಕ್ಷ ಗಣಪತಿ ಬಾಳಮ್ಮನವರ, ಪಾ.ಡ್ಯಾನಿಲ್, ಮೆಲಬಿನ್ ಲೋಬೊ, ಅನಿಲ ಡಿಸೋಜಾ, ಜಾನ್ಸನ್ ಪಿಂಟೋ, ಗಿಲ್ಬರ್ಟ, ಸೀಮಾ ನಾಯಕ ಮುಂತಾದವರು ಉಪಸ್ಥಿತರಿದ್ದರು.