ಸಾರಾಂಶ
ಅಭಿವೃದ್ಧಿಗೆ ಹಣವಿಲ್ಲ ಎನ್ನುವವರು ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ । ಇಂತಹ ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ತಲ್ಲಣ
ಕನ್ನಡಪ್ರಭ ವಾರ್ತೆ ಮದ್ದೂರುಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಡುವುದೇ ದೊಡ್ಡ ತಪ್ಪು. ಅಭಿವೃದ್ಧಿಗೆ ಹಣವಿಲ್ಲ ಎನ್ನುವವರು ಗ್ಯಾರಂಟಿಗಳಿಗೆ ಕೊಡುತ್ತಿದ್ದಾರೆ. ಇಂತಹ ಯೋಜನೆಗಳು ಅಭಿವೃದ್ಧಿಗೆ ಮಾರಕ. ಆರ್ಥಿಕ ಪರಿಸ್ಥಿತಿ ತಲ್ಲಣಕ್ಕೂ ಕಾರಣವಾಗಿವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರು ಕೇಳಿರಲಿಲ್ಲ. ಅಧಿಕಾರಕ್ಕೆ ಬರುವುದನ್ನು ಗುರಿಯಾಗಿಸಿಕೊಂಡು ಘೋಷಿಸಿದರು. ಪ್ರತಿ ವರ್ಷ ೫೮ ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ. ಇನ್ನು ಅಭಿವೃದ್ಧಿಗೆ ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.ಗ್ಯಾರಂಟಿ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿರುವುದನ್ನು ಸರಿದೂಗಿಸಲು ಜನರ ಮೇಲೆಯೇ ತೆರಿಗೆ ಹೊರೆ ಹೆಚ್ಚಿಸಿದ್ದಾರೆ. ವಿದ್ಯುತ್, ನೋಂದಣಿ ಶುಲ್ಕ, ಮದ್ಯ ಸೇರಿದಂತೆ ಹಲವಾರು ತೆರಿಗೆಗಳನ್ನು ಹೆಚ್ಚು ಮಾಡಿದ್ದಾರೆ. ಜನರ ಮೇಲೆ ತೆರಿಗೆ ಹೊರೆ ಹಾಕಿ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಜರಿದರು.
ಸರ್ಕಾರದವರು ಬೇರೆಲ್ಲಿಂದಲೋ ತಂದು ಹಣವನ್ನು ಜನರಿಗೆ ಕೊಡುತ್ತಿಲ್ಲ. ಜನರ ದುಡ್ಡಿನಿಂದಲೇ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದಾರೆ. ಅದಕ್ಕೂ ಹೆಚ್ಚಿನ ದುಡ್ಡನ್ನು ಜನರಿಂದಲೇ ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಉಚಿತವಾಗಿ ಬಸ್ ಟಿಕೆಟ್ ಕೊಟ್ಟು ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.ಒಂದೆಡೆ ಶಾಸಕರು ಮತ್ತು ಸಂಸದರು ಕೇವಲ ಒಂದೇ ನಿಮಿಷದಲ್ಲಿ ತಮ್ಮ ವೇತನವನ್ನು ದುಪ್ಪಟ್ಟುಗೊಳಿಸಿಕೊಂಡರು. ಮತ್ತೊಂದೆಡೆ ಅಭಿವೃದ್ಧಿಗೆ ಹಣವಿಲ್ಲವೆಂದು ಹೇಳುತ್ತಾರೆ. ಹೀಗೆ ಮಾಡುವುದು ತಪ್ಪಲ್ಲವೇ. ಅದಕ್ಕಾಗಿ ಚುನಾವಣೆಗೆ ನಿಲ್ಲುವ ವ್ಯಕ್ತಿಗಳು ಸೇವೆಯನ್ನು ಗುರಿಯಾಗಿಸಿಕೊಂಡಿರಬೇಕು. ಅದನ್ನು ವೃತ್ತಿಯನ್ನಾಗಿಸಿಕೊಂಡರೆ ಅದರಿಂದ ತನಗೆ ಸಿಗಬಹುದಾದ ಲಾಭವನ್ನಷ್ಟೇ ಲೆಕ್ಕ ಹಾಕುತ್ತಾರೆ. ಈಗ ಆಗಿರುವುದೂ ಅದೇ ಎಂದು ವ್ಯಂಗ್ಯವಾಡಿದರು.
ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡುವುದೇ ದೊಡ್ಡ ತಪ್ಪು. ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ಅದು ಒಳ್ಳೆಯದಲ್ಲ. ಅವು ಮುಂದುವರಿದರೆ ಆರ್ಥಿಕವಾಗಿ ಕ್ಲಿಷ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಜನಸಾಮಾನ್ಯರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಕೆ ನೀಡಿದರು.ಮಠದ ಸ್ವಾಮೀಜಿಗಳು ಸಮಾಜದ ಉದ್ಧಾರಕ್ಕಾಗಿ ಕೆಲಸ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು. ರಾಜಕಾರಣವನ್ನು ಅಂಟಿಸಿಕೊಂಡರೆ ಸ್ವಾಮೀಜಿಗಳಿಗೆ ಗೌರವ ಬರುವುದಿಲ್ಲ, ಪೀಠಕ್ಕೂ ಶೋಭೆ ತರುವುದಿಲ್ಲ. ಮಠಾಧೀಶರಾದವರು ಸಮಾಜ ಮತ್ತು ಜನರ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದಾಗ ಗೌರವಕ್ಕೆ ಪಾತ್ರರಾಗುವರು ಎಂದು ಹೇಳಿದರು.
೧೭ಕೆಎಂಎನ್‌ಡಿ-೨ಮದ್ದೂರಿನ ಪ್ರವಾಸಿಮಂದಿರಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಆಗಮಿಸಿದ್ದರು.