ಸಾರಾಂಶ
ಹೊಸಪೇಟೆ: ಶಿಕ್ಷಣ ಮತ್ತು ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಈ.ತುಕಾರಾಂ ಹೇಳಿದರು.
ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ನಡೆದ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯುನಿಟ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಹೊಸಪೇಟೆ ತಾಲೂಕಿನಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯುನಿಟ್ ಜಿಲ್ಲಾಸ್ಪತ್ರೆ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವುದು ಒಳ್ಳೆಯ ವಿಚಾರ. ಜಿಲ್ಲೆಯಲ್ಲಿ ಪಿಎಚ್‌ಸಿ, ಸಿಎಚ್‌ಸಿ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಟ್ಟೂರಿಗೂ 50 ಹಾಸಿಗೆಯ ಆಸ್ಪತ್ರೆ ಮಂಜೂರಾಗಿದೆ ಎಂದರು.
ಸಂಸದನ ಕೆಲಸ ಇಡೀ ಅಖಂಡ ಜಿಲ್ಲೆಯ ಪ್ರಾಮಾಣಿಕವಾಗಿ ಅಭಿವೃದ್ಧಿಗೆ ಕೆಲಸ ಮಾಡಲು ಬದ್ಧನಾಗಿದ್ದೇನೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಕೆಲಸ ಮಾಡುವೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅವಳಿ ಜಿಲ್ಲೆಗಳು ಮುಂದಿರುವಂತೆ ಕೆಲಸ ಮಾಡುತ್ತೇನೆ. ನಮ್ಮ ಹಿರಿಯರು ನೀಡಿದ್ದನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ತುಕಾರಾಂ ಮಾತಾಡಲ್ಲ. ಕೆಲಸ ಮಾತಾಡುತ್ತದೆ. ಶೀಘ್ರದಲ್ಲೇ ಹೊಸಪೇಟೆಯಲ್ಲಿ ಸಂಸದರ ಕಚೇರಿ ಆರಂಭವಾಗಲಿದ್ದು, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶ್ರಮಿಸಲಾಗುವುದು ಎಂದರು.ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ನಗರದಲ್ಲಿ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಕನಿಷ್ಠ ಸೌಕರ್ಯಗಳಿರಲಿಲ್ಲ. ಪ್ರತಿದಿನ ಆಸ್ಪತ್ರೆಗೆ ನೂರಾರು ಜನರು ಬರುತ್ತಾರೆ. ಅವರಿಗೆ ಕೂರಲು ಆಸನಗಳಿರಲಿಲ್ಲ. ಹೀಗಾಗಿ ₹2 ಕೋಟಿ ಅನುದಾನ ನೀಡಿ ಅಭಿವೃದ್ಧಿ ಮಾಡಲಾಗಿದೆ. ಇದು ಡಿಎಚ್‌ಒ ಡಾ. ಎಲ್.ಆರ್. ಶಂಕರ ನಾಯ್ಕ ಅವರ ಸಹಕಾರ ಮತ್ತು ಶ್ರಮದಿಂದ ಸಾಧ್ಯವಾಗಿದೆ ಎಂದರು.
ತಾಲೂಕಿನ ಕಲ್ಲಹಳ್ಳಿ, ನಾಗೇನಹಳ್ಳಿ, ಪಾಪಿನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದೆ. 250 ಹಾಸಿಗೆಯ ಜಿಲ್ಲಾಸ್ಪತ್ರೆಯ 400 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು ಸವಾಲಾಗಿತ್ತು. ಈಗ 300 ಹಾಸಿಗೆ ಆಗಿದೆ. ಮೆಡಿಕಲ್ ಕಾಲೇಜು ಕೇಳಲು 500-600 ಹಾಸಿಗೆ ಇದ್ದರೆ ಅನುಕೂಲ. ಈಗ ಇದನ್ನು ಸಂಸದರು ಪ್ರಯತ್ನಿಸಿ 400 ಹಾಸಿಗೆಗೆ ಏರಿಸಲು ಸಹಕರಿಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ವಿಮಾನ ನಿಲ್ದಾಣ ಮಾಡಿಸಿಕೊಡಬೇಕು ಎಂದರು.ಡಿಎಚ್‌ಒ ಡಾ.ಎಲ್.ಆರ್.ಶಂಕರನಾಯ್ಕ ಮಾತನಾಡಿ, ಕ್ರಿಟಿಕಲ್ ಕೇರ್ ಯುನಿಟ್‌ನಿಂದ ತುರ್ತು ಚಿಕಿತ್ಸೆ, ಐಸಿಯು ಸೇರಿ ತ್ವರಿತ ಚಿಕಿತ್ಸೆಗೆ ಅನುಕೂಲವಾಗಲಿದೆ. ನಮ್ಮಲ್ಲಿ ಮೆಡಿಕಲ್ ಕಾಲೇಜು ಮತ್ತು ಜಿಲ್ಲಾಸ್ಪತ್ರೆ ಇಲ್ಲದಿರುವುದರಿಂದ ಹುಬ್ಬಳ್ಳಿ, ಧಾರವಾಡ, ಬೆಂಗಳೂರಿಗೆ ಹೋಗುವ ಪರಿಸ್ಥಿತಿ ಇದೆ. ಈಗ ಕ್ರಿಟಿಕಲ್ ಕೇರ್ ಯುನಿಟ್ ಆರಂಭವಾದರೆ ಸಮಸ್ಯೆ ಬಗೆಹರಿಯಲಿದೆ. ದಿನ 24 ಗಂಟೆ ಐದು ಜನ ಸ್ಪೆಷಲಿಸ್ಟ್ ಗಳು, 12 ಡ್ಯೂಟಿ ಡಾಕ್ಟರ್ ಸೇರಿ ಸ್ಟಾಫ್ ನರ್ಸ್ ಗಳು ಕರ್ತವ್ಯ ನಿರ್ವಹಿಸಲಿದ್ದು, 14 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಸೇವೆ ಸಿಗಲಿದೆ ಎಂದರು.
ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿದರು. ಹಗರಿಬೊಮ್ಮನಹಳ್ಳಿ ಶಾಸಕ ನೇಮರಾಜ್ ನಾಯ್ಕ, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ, ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಜಗದೀಶ್ ಪಾಟ್ನೆ, ಟಿಎಚ್‌ಒ ಡಾ.ಭಾಸ್ಕರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಧರ್ಮನಗೌಡ ಮತ್ತಿತರರಿದ್ದರು.