ಸಾರಾಂಶ
ಪ್ರತಿವರ್ಷ ನಮ್ಮ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹೊರದೇಶಕ್ಕೆ ಉನ್ನತ ಶಿಕ್ಷಣ, ಸಂಶೋಧನೆಗೆ ತೆರಳುತ್ತಿದ್ದಾರೆ. ಇದರಿಂದ ನಮ್ಮ ದೇಶದ ಅತ್ಯಮೂಲ್ಯ ಸಂಪತ್ತು ಅನ್ಯ ದೇಶಗಳ ಪಾಲಾಗುತ್ತಿದೆ. ಅಲ್ಲದೇ ಶಿಕ್ಷಣದಲ್ಲಿ ಬದಲಾವಣೆ ತಾರದಿದ್ದರೆ ಜಾಗತಿಕ ಸ್ಪರ್ಧೆ ಎದುರಿಸುವುದು ಕಷ್ಟ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಶರತ್ ಅನಂತಮೂರ್ತಿ ವಿಷಾದ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಸಾಗರ
ಪ್ರತಿವರ್ಷ ನಮ್ಮ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಹೊರದೇಶಕ್ಕೆ ಉನ್ನತ ಶಿಕ್ಷಣ, ಸಂಶೋಧನೆಗೆ ತೆರಳುತ್ತಿದ್ದಾರೆ. ಇದರಿಂದ ನಮ್ಮ ದೇಶದ ಅತ್ಯಮೂಲ್ಯ ಸಂಪತ್ತು ಅನ್ಯ ದೇಶಗಳ ಪಾಲಾಗುತ್ತಿದೆ. ಅಲ್ಲದೇ ಶಿಕ್ಷಣದಲ್ಲಿ ಬದಲಾವಣೆ ತಾರದಿದ್ದರೆ ಜಾಗತಿಕ ಸ್ಪರ್ಧೆ ಎದುರಿಸುವುದು ಕಷ್ಟ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಶರತ್ ಅನಂತಮೂರ್ತಿ ವಿಷಾದ ವ್ಯಕ್ತಪಡಿಸಿದರು.ದೇವರಾಜ ಅರಸು ಕಲಾಭವನದಲ್ಲಿ ಶನಿವಾರ ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ ವಿದ್ಯಾರ್ಥಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ಮೂಲಕ ಸರ್ಕಾರ ವಿದ್ಯಾರ್ಥಿಗಳನ್ನು ನಮ್ಮಲ್ಲಿಯೇ ಉಳಿಸಿಕೊಂಡು ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು. ನಮ್ಮ ಶಿಕ್ಷಣ ಪದ್ಧತಿಯಲ್ಲಿಯೂ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ. ಈ ದಿನದ ಓದು, ವಿಜ್ಞಾನದ ಸಂಗತಿಗಳು ನಾಳೆಗೆ ಹಳತಾಗಿ ಹೊಸಹೊಸದು ಬಂದಿರುತ್ತದೆ. ಆದ್ದರಿಂದ ನಮ್ಮ ಸಂಪತ್ತನ್ನು ಉಳಿಸಿಕೊಳ್ಳಲು ಜಗತ್ತಿನೊಂದಿಗೆ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ನಮ್ಮಲ್ಲಿ ಶಿಕ್ಷಣದ ಬದಲಾವಣೆ ಮಾಡದೆ ಹೋದಲ್ಲಿ ಜಾಗತಿಕ ಸ್ಪರ್ಧೆಯಲ್ಲಿ ಗೆಲ್ಲುವುದು ಕನಸಾಗುತ್ತದೆ ಎಂದರು. ಹೊರ ದೇಶಗಳ ಶಿಕ್ಷಣಕ್ಕಿಂತ ನಮ್ಮ ದೇಶದ ಶಿಕ್ಷಣ ಇನ್ನಷ್ಟು ಗುಣಾತ್ಮಕವಾಗಬೇಕು. ಪ್ರಾಧ್ಯಾಪಕರು ದಿನೇದಿನೇ ತಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಸರ್ಕಾರ ವಿದ್ಯಾಸಂಸ್ಥೆಗಳ ಮೂಲಕ ವಿಜ್ಞಾನಕ್ಕೆ ಆದ್ಯತೆ ನೀಡುವ ಜೊತೆಗೆ ಹೊಸಹೊಸ ಅವಿಷ್ಕಾರಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಕುತೂಹಲ ಮೂಡಿಸುವ ಮೂಲಕ ಜಾಗತಿಕ ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸುವ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಹೇಳಿದರು.ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ. ಹರನಾಥರಾವ್ ಅಧ್ಯಕ್ಷತೆ ವಹಿಸಿದ್ದರು. ಡಾ. ಎಚ್.ಎಂ. ಶಿವಕುಮಾರ್, ಡಾ. ನಿರಂಜನಮೂರ್ತಿ, ವೆಂಕಟೇಶ್ ಕವಲಕೋಡು, ಡಾ. ಬಿ.ಸಿ. ಶಶಿಧರ್, ಟಿ.ಪಿ. ಅಶೋಕ್ ಇನ್ನಿತರರು ಹಾಜರಿದ್ದರು. ಡಾ.ಲಕ್ಷ್ಮೀಶ್ ಎ.ಎಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೇಯಾ ವಂದಿಸಿದರು. ಅನನ್ವಿ ನಿರೂಪಿಸಿದರು.