ಸಾರಾಂಶ
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ದಾಸೇಗೌಡಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಾರತೀಯ ಯುವ ಜನಾಂಗ ಮೌಢ್ಯ, ಅವೈಚಾರಿಕ, ವಿವೇಚನಾ ರಹಿತ ಆಲೋಚನೆಗಳನ್ನು ತೊರೆದು ವೈಜ್ಞಾನಿಕ ಜೀವನ ವಿಧಾನ ಅಳವಡಿಸಿಕೊಂಡಲ್ಲಿ ಮಾತ್ರ ಭಾರತ ಜಾಗತಿಕ ವಿಜ್ಞಾನ ನಾಯಕ ದೇಶವಾಗಿ ಹೊರ ಹೊಮ್ಮಲು ಸಾಧ್ಯ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಮ್.ಆರ್ ದಾಸೇಗೌಡ ಅಭಿಪ್ರಾಯ ಪಟ್ಟರು.ಚಿತ್ರದುರ್ಗ ವಿಜ್ಞಾನ ಕೇಂದ್ರ ಮತ್ತು ಪಿ.ವಿ.ಎಸ್ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮೂಹ ಸನ್ನಿಗೆ ಒಳಗಾಗದೆ, ವಿಜ್ಞಾನದ ಗುಣಲಕ್ಷಣಗಳಾದ ಪ್ರಶ್ನಿಸುವಿಕೆ, ಪ್ರಯೋಗ, ವಿಶ್ಲೇಷಣೆ, ತರ್ಕ, ಊಹೆಗಳನ್ನು ನಮ್ಮ ಭಾರತೀಯ ಯುವಕರು ಉಸಿರಾಗಿಸಿಕೊಂಡಾಗ ಮಾತ್ರ ಯುವಕರು ಜಾಗತಿಕ ನಾಯಕರಾಗಿ ಬೆಳಗಲು ಸಾಧ್ಯ ಎಂದು ಹೇಳಿದರು.ದೇಶದ ಗಂಭೀರ ಸಮಸ್ಯೆಗಳಾದ ಹಸಿವು, ಬಡತನ, ಸಣ್ಣ ಕಾಯಿಲೆಗಳಿಗೆ ದುಭಾರಿ ವೆಚ್ಚ, ಶುದ್ಧ ಕುಡಿವ ನೀರಿನ ಸಮಸ್ಯೆ, ವಾಯು ಮಾಲಿನ್ಯ, ಕಾಡುತ್ತಿರುವ ಪ್ಲಾಸ್ಟಿಕ್, ಕೃಷಿ ಸಮಸ್ಯೆಗಳನ್ನು ನೋಡಿದರೆ ವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಬೇಕಾದ್ದು ಇನ್ನು ಬಹಳಷ್ಟಿದೆ ಎಂಬುದು ಅರಿವಿಗೆ ಬರುತ್ತದೆ. ವಿಜ್ಞಾನ ಕ್ಷೇತ್ರ ಎಲ್ಲಾ ಕ್ಷೇತ್ರಗಳಿಗಿಂತ ಮುಂದಿದ್ದರೆ ಪ್ರಗತಿ ಸಾಧ್ಯ. ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳನ್ನು ಅರಿತುಕೊಳ್ಳಬೇಕೆಂದರೆ ಯುವಕರು ಮೂಲ ವಿಜ್ಞಾನವನ್ನು ಓದುವ ಕಡೆ ಗಮನ ಕೊಡಬೇಕು. ಭಾರತದ ವೈಜ್ಞಾನಿಕ ಇತಿಹಾಸ ಅರಿತಿರಬೇಕು. ಇದಕ್ಕೆ ನಮ್ಮ ಸರ್ಕಾರಗಳು ಆಧ್ಯತೆ ನೀಡಬೇಕು ಎಂದು ಹೇಳಿದರು.
ನಮ್ಮ ದೇಶ ಜನಸಂಖ್ಯೆಯಲ್ಲಿ 1ನೇ ಸ್ಥಾನದಲ್ಲಿದ್ದರೆ ಸಂಶೋಧನೆಯಲ್ಲಿ ವಿಶ್ವದ 140 ದೇಶಗಳ ಪೈಕಿ 66ನೇ ಸ್ಥಾನದಲ್ಲಿದೆ. ಸಂಶೋಧನ ಪ್ರಬಂಧ ಮಂಡನೆಯಲ್ಲಿ ಭಾರತ ಶೇ. ಒಂದರಷ್ಟು, ಚೀನಾ ಶೇ.5 ಹಾಗೂ ಅಮೇರಿಕಾ ಶೇ.19 ರಷ್ಟಿದೆ. ನಮ್ಮ ಸರ್ಕಾರ ಮೂಲ ವಿಜ್ಞಾನ ಕಲಿಕೆಗೆ ಹೆಚ್ಚು ಒತ್ತು ನೀಡದಿರುವುದು ಮತ್ತು ನಮ್ಮ ಯುವ ಜನಾಂಗ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಕಡೆಗೆ ವಾಲುತ್ತಿರುವುದು ಇದಕ್ಕೆ ಕಾರಣವೆಂದರು.ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ.ರಾಜಕುಮಾರ್ ಮಾತನಾಡಿ, ಫೆಬ್ರವರಿ 28ನ್ನು ಭಾರತೀಯರು ಭಾರತದಲ್ಲಿ ವಿಜ್ಞಾನ ಹುಟ್ಟಿದ ದಿನವೆಂದೇ ಭಾವಿಸಬೇಕು. ರಾಮನ್ ಪರಿಣಾಮದ ಸಂಶೋಧನೆ ವಿಶ್ವದಾದ್ಯಂತ ಉಪಯೋಗವಾಗಿ ಜಗತ್ತಿಗೆ ಹೊಸಬೆಳಕಾಗಿದೆ. ವಿಶ್ವದಲ್ಲಿ ಇದುವರೆಗೂ ರಾಮನ್ ಪರಿಣಾಮದಂತಹ ಸಂಶೋಧನೆಗಳು ಆಗಿಲ್ಲ ಎಂದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಅಸೊಸಿಯೆಟ್ ಪ್ರೊಫೆಸರ್ ಡಾ.ವಿದ್ಯಾ ಮಾತನಾಡಿ, ರಾಮನ್ ಅವರಿಗೆ ನೊಬೆಲ್ ಬಹುಮಾನದಿಂದ ಬಂದ ಹಣದಿಂದ ರಾಮನ್ ರೀಸರ್ಚ್ ಇನ್ಸ್ಟಿಟ್ಯೂಟ್ ನ್ನು ಸ್ಥಾಪನೆ ಮಾಡಿದರು. ಅದು ಅನೇಕ ಯುವ ವಿಜ್ಞಾನಿಗಳಿಗೆ ಸಂಶೋಧನೆಗೆ ಅವಕಾಶಮಾಡಿಕೊಟ್ಟಿದೆ. ಪ್ರತಿ ವರ್ಷ ಅಲ್ಲಿ ಓಪನ್ ಡೇ ಕಾರ್ಯಕ್ರಮವಿದ್ದು ಅದು ಮಾರ್ಚ್ ಒಂದರಂದೆ ಇದೆ. ಆಸಕ್ತಿಯುಳ್ಳವರು ಭಾಗವಹಿಸಬಹುದು ಎಂದು ಹೇಳಿದರು.ಪಿವಿಎಸ್ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಆರ್.ಉಷಾ, ವಿಜ್ಞಾನ ಕೇಂದ್ರದ ಖಜಾoಚಿ ಕೆ.ರಾಮಪ್ಪ, ವೆಂಕಟೇಶ್ವರ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಹ ಪ್ರಾಧ್ಯಾಪಕ ಭೈರೆಸಿದ್ದಪ್ಪ, ಪ್ರಶಿಕ್ಷಣಾರ್ಥಿಗಳಾದ ಸಿ.ಐಶ್ವರ್ಯ, ಸುರೇಶ್, ನಂದಿನಿ ಮಾತನಾಡಿದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ವಿಜ್ಞಾನ ಕೇಂದ್ರದ ಸದಸ್ಯರಾದ ಕೆ.ಎಸ್.ವಿಜಯ್ ಬಹುಮಾನ ವಿತರಿಸಿದರು. ವಿಜ್ಞಾನ ಕೇಂದ್ರದ ಜಯದೇವ ಮೂರ್ತಿ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.