ಯೋಗ, ಪ್ರಕೃತಿ ಚಿಕಿತ್ಸೆಗೆ ಜಾಗತಿಕ ಮನ್ನಣೆ: ಕೇಂದ್ರ ಸಚಿವ ಜಾಧವ್‌

| Published : Jan 19 2025, 02:19 AM IST

ಯೋಗ, ಪ್ರಕೃತಿ ಚಿಕಿತ್ಸೆಗೆ ಜಾಗತಿಕ ಮನ್ನಣೆ: ಕೇಂದ್ರ ಸಚಿವ ಜಾಧವ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ರಯತ್ನದಿಂದಾಗಿ ಇಂದು ಈ ಪಾರಂಪರಿಕ ಪದ್ಧತಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿದೆ. ದೇಶ-ವಿದೇಶಗಳಲ್ಲಿ ಜೂನ್ ೨೧ ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಹಲವು ಶತಮಾನಗಳಿಂದ ಭಾರತದಲ್ಲಿ ಪ್ರಕೃತಿಯ ಪ್ರಶಾಂತ ಪರಿಸರದಲ್ಲಿ ಋಷಿ-ಮುನಿಗಳು ಆರೋಗ್ಯಭಾಗ್ಯ ರಕ್ಷಣೆಗಾಗಿ ಬಳಸುತ್ತಿದ್ದ ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಕ್ಕೆ ಜಾಗತಿಕಮಟ್ಟದಲ್ಲಿ ಇಂದು ಮಾನ್ಯತೆ, ಗೌರವ ಇದೆ. ವೇದ-ಉಪನಿಷತ್ತುಗಳಲ್ಲಿ ಕೂಡಾ ಈ ಪದ್ಧತಿ ಉಲ್ಲೇಖವಿದೆ ಎಂದು ಕೇಂದ್ರ ಆಯುಷ್ ಸಚಿವ ಪ್ರತಾಪ್‌ರಾವ್ ಗಣಪತ್‌ರಾವ್ ಜಾಧವ್ ಹೇಳಿದ್ದಾರೆ.

ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನಲ್ಲಿ ಪದವಿ ತರಗತಿ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ರಯತ್ನದಿಂದಾಗಿ ಇಂದು ಈ ಪಾರಂಪರಿಕ ಪದ್ಧತಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗುತ್ತಿದೆ. ದೇಶ-ವಿದೇಶಗಳಲ್ಲಿ ಜೂನ್ ೨೧ ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ ಎಂದರು.

ವೈಜ್ಞಾನಿಕ ದೃಷ್ಟಿಕೋನದಿಂದಲೂ ಈ ಪದ್ಧತಿಯನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸದ್ಯದಲ್ಲಿಯೇ ಸಮಾಲೋಚನಾ ಸಭೆ ನಡೆಸಿ ಸಂಘಟಿತ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ದೇಶದಲ್ಲೆ ಪ್ರಥಮವಾಗಿ ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಪದವಿ ಕಾಲೇಜು ಪ್ರಾರಂಭಿಸಿದ್ದು ಇಲ್ಲಿ ಕಲಿತವರೆಲ್ಲ ದೇಶ-ವಿದೇಶಗಳಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ. ಪ್ರಾಚೀನ ಪದ್ಧತಿಯ ಬಗ್ಯೆ ಜನಸಾಮಾನ್ಯರಲ್ಲಿಯೂ ಅರಿವು, ಜಾಗೃತಿ ಮೂಡಿಸಲಿಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಹತ್ತು ಶುಶ್ರ‍್ರೂಷಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಪಂಚತಾರಾ ಹೊಟೇಲ್‌ಗಳಲ್ಲಿ ಕೂಡಾ ಅಲ್ಲಲ್ಲಿ ಶುಶ್ರೂಷಾ ಕೇಂದ್ರಗಳು ಜನಪ್ರಿಯವಾಗುತ್ತಿವೆ ಎಂದರು.

ಉಡುಪಿ, ಬೆಂಗಳೂರು ಮತ್ತು ಹಾಸನದಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗಳು ಹಾಗೂ ಧರ್ಮಸ್ಥಳ, ಪರೀಕಾ ಮತ್ತು ಬೆಂಗಳೂರಿನಲ್ಲಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಉತ್ತಮ ಬೆಂಬಲ ಸಿಗುತ್ತಿದೆ ಎಂದರು.

೨೫ ಮಂದಿಗೆ ಸ್ನಾತಕೋತ್ತರ ಪದವಿ ಹಾಗೂ ೮೯ ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ನವದೆಹಲಿಯ ಯೋಗ ಮತ್ತು ಪ್ರಕೃತಿಚಿಕಿತ್ಸಾ ಕೇಂದ್ರೀಯ ಸಂಶೋಧನಾ ಪರಿಷತ್‌ನ ನಿರ್ದೇಶಕ ಡಾ. ರಾಘವೇಂದ್ರ ರಾವ್, ಬೆಂಗಳೂರಿನ ಡಾ. ನವೀನ್ ವಿಶ್ವೇಶ್ವರಯ್ಯ ಮತ್ತು ಬೆಂಗಳೂರಿನ ಆಯುಷ್ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿ ಕಮಲಾ ಬಾಯಿ ಇದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಅನನ್ಯಾ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು. ಕೇಂದ್ರ ಆಯುಷ್ ಸಚಿವ ಪ್ರತಾಪ್‌ರಾವ್ ಗಣಪತ್‌ರಾವ್ ಜಾಧವ್ ನೂತನ ಪದವೀಧರರಿಗೆ ಪದವಿ ಪ್ರದಾನ ಮಾಡಿದರು.