ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಾಗತಿಕವಾಗಿ ಕ್ಯಾನ್ಸರ್ ರೋಗ ಪ್ರತಿವರ್ಷ ಹೆಚ್ಚಾಗುತ್ತಿದೆ, ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗಬಹುದು ಎಂದು ಕ್ಯಾನ್ಸರ್ ರೋಗ ತಜ್ಞ ಡಾ.ಲೇಪಾಕ್ಷಿ ಕಳವಳ ವ್ಯಕ್ತಪಡಿಸಿದರು.ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಬೆಳ್ಳಂಬೆಳಿಗ್ಗೆ ಮೈಸೂರಿನ ನಾರಾಯಣ ಆಸ್ಪತ್ರೆ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಮಂಡ್ಯ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ನಾರಾಯಣ ಆರೋಗ್ಯ ಘೋಷವಾಕ್ಯದೊಂದಿಗೆ ವಾಕಥಾನ್ ಅಭಿಯಾನದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಸುಮಾರು ೨೦ ಮಿಲಿಯನ್ (೨ ಕೋಟಿ) ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ, ೧೦ ಮಿಲಿಯನ್ (೧ಕೋಟಿ) ಜನ ಸಾವನ್ನಪ್ಪುತ್ತಿದ್ದಾರೆ, ಭಾರತದಲ್ಲಿ ೧೬ ಲಕ್ಷ ಮಂದಿಗೆ ಕಾಣಿಸಿಕೊಳ್ಳುತ್ತಿದೆ, ಪ್ರತಿ ವರ್ಷ ಇದರ ಪ್ರಮಾಣ ಹೆಚ್ಚಾಗುತ್ತಿದೆ, ಸರಿಸುಮಾರು ೯ ಮಂದಿಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಲಕ್ಷಣಗಳು ಕಾಣಿಸುತ್ತಿವೆ ಎಂದು ನುಡಿದರು.ಭಾರತದ ೧೪೪ಕೋಟಿ ಜನಸಂಖ್ಯೆಯಲ್ಲಿ ೧೬ ಲಕ್ಷ ಜನ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಶೇ.೯೦ರಷ್ಟು ಮಂದಿ ೩ ಮತ್ತು ೪ನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳು ವೈದ್ಯರಲ್ಲಿ ಬರುತಿದ್ದಾರೆ, ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ ಔಷೋಧೋಪಚಾರ ಮಾಡಿದರೂ ಬದುಕುಳಿಯುವುದು ಕಡಿಮೆ ಎಂದು ಎಚ್ಚರಿಸಿದರು.
ಒಂದು ಅಥವಾ ಎರಡನೇ ಹಂತದಲ್ಲಿರುವರ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸಾ ವಿಧಾನಗಳಿಂದ ಗುಣಪಡಿಸಬಹುದು, ಸಹಜ ಜೀವನ ನಡೆಸುಷ್ಟರ ಮಟ್ಟಿಗೆ ತಯಾರು ಮಾಡಬಹುದು ಎಂದು ಸಲಹೆ ನೀಡಿದರು.ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ (ನಾನ್-ಮೆಲನೋಮ ಮತ್ತು ಮೆಲನೋಮ), ಲಿವರ್ ಕ್ಯಾನ್ಸರ್ ಹೀಗೆ ಹಲವು ವಿಧದ ಭಾಗಗಳಿಗೆ ಸೋಂಕು ತಗಲುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಹವ್ಯಾಸ ಮತ್ತು ಅಭ್ಯಾಸಗಳು ಶಕ್ತಿಯಾಗಿ ನಿಲ್ಲುತ್ತವೆ. ಬದಲಾದ ಜೀವನಶೈಲಿ, ಆಹಾರಪದ್ದತಿಗಳಿಂದ ಸಾಕಷ್ಟು ರೋಗಗಳು ಬರುತ್ತಿವೆ. ನಮ್ಮ ಆರೋಗ್ಯ ಆಹಾರ ಮತ್ತು ಹವ್ಯಾಸಗಳ ಮೇಲೆ ನಿಂತಿರುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗ ತಜ್ಞ ಡಾ.ಎಂ.ಎನ್.ರವಿ, ಡಾ.ನಿಶ್ಚಲ್ ರಾಜ್, ಡಾ.ವಿದ್ಯಾ, ಡಾ.ಪ್ರಸನ್ನ, ಲಯನ್ ಸಂಸ್ಥೆಯ ಡಾ.ರಮೇಶ್, ಪ್ರತಿಮಾ ರಮೇಶ್, ನಿತ್ಯಾನಂದ, ನಾರಾಯಣಸ್ವಾಮಿ, ಹನುಮಂತಯ್ಯ, ಎಲ್.ಕೃಷ್ಣ, ಸುಜಾತ ಕೃಷ್ಣ, ಹೊಸಹಳ್ಳಿ ಶೇಖರ್, ಲಯನ್ಸ್ ಇಂಟನ್ಯಾಷನಲ್ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರಿದ್ದರು.