ಚೆಲುವನಾರಾಯಣನ ಸನ್ನಿಧಿಯಲ್ಲಿ ವೈಭವದ ದೀಪಾವಳಿ

| Published : Nov 04 2024, 12:23 AM IST

ಸಾರಾಂಶ

ಸಾವಿರಾರು ಭಕ್ತರು ಆಗಮಿಸಿದ ಹಿನ್ನೆಲೆ ಭಕ್ತರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್‌ ಮಾಡಿದ್ದರಿಂದ ಚೆಲುವನಾರಾಯಣಸ್ವಾಮಿಯ ಉತ್ಸವಕ್ಕೇ ತೊಂದರೆಯಾಯಿತು. ಶನಿವಾರ ರಾತ್ರಿ ರಸ್ತೆಯ ಎರಡೂ ಬದಿ ಭಕ್ತರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿ ದರ್ಶನಕ್ಕೆ ಹೋಗಿದ್ದರಿಂದ ಸ್ವಾಮಿಯ ಶೇಷವಾಹನೋತ್ಸವ ಸುಗಮವಾಗಿ ಸಾಗಲು ಅಡ್ಡಿಯಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀ ಕ್ಷೇತ್ರದ ಚೆಲುವನಾರಾಯಣಸ್ವಾಮಿಯವರ ದೀಪಾವಳಿ ಉತ್ಸವ ಶನಿವಾರ ರಾತ್ರಿ ವೈಭವದಿಂದ ನೆರವೇರಿತು. ಸ್ವಾಮಿ ಸನ್ನಿಧಿ ಪರಿಚಾರಕ ಎಂ.ಎನ್ ಪಾರ್ಥಸಾರಥಿ ಕುಟುಂಬ ಅನೂಚಾನ ಪರಂಪರೆಯಂತೆ ಉತ್ಸವದ ಕೈಂಕರ್ಯ ನೆರವೇರಿಸಿತು.

ಮೊದಲು ನಡೆದ ಉತ್ಸವದಲ್ಲಿ ಪರಿಚಾರಕರ ಪುಷ್ಪ ಕೈಂಕರ್ಯ ನಡೆದರೆ ನಂತರ ಬಲಿಪಾಡ್ಯಮಿ ಅಂಗವಾಗಿ ದೊಡ್ಡ ಶೇಷವಾಹನೋತ್ಸವ ವೈಭವದಿಂದ ನೆರವೇರಿತು. ಕೈಂಕರ್ಯಪರರು, ಸ್ಥಾನೀಕರು ವೈವಿಧ್ಯಮಯ ಪಟಾಕಿಗಳನ್ನು ಸ್ವಾಮಿ ಉತ್ಸವದ ವೇಳೆ ಸಿಡಿಸಿ, ಸ್ವಾಮಿಯ ದೀಪಾವಳಿ ಉತ್ಸವದಲ್ಲಿ ಪಾಲ್ಗೊಂಡರು.

ದೀಪಾವಳಿಯಂದು ಮೇಲುಕೋಟೆಗೆ ಭಕ್ತಸಾಗರವೇ ಹರಿದು ಬಂದಿತ್ತು. ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವರ ದರ್ಶನ ಪಡೆದರು.

ದೇವಾಲಯದ ಇಒ ಶೀಲಾ ಖುದ್ದು ಭಕ್ತರ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟರು. ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್ ಗುರೂಜಿ, ಪರಿಚಾರಕ ಎಂ.ಎನ್ ಪಾರ್ಥಸಾರಥಿ ಕೈಂಕರ್ಯಪರರು ಮತ್ತು ಸಿಬ್ಬಂದಿಯ ಸಹಕಾರದಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು. ಮೇಲುಕೋಟೆ ಪೊಲೀಸರು ಭದ್ರತೆ ನೀಡಿದ್ದರು. ಯತಿರಾಜದಾಸರ್ ಗುರುಪೀಠ ಹಾಗೂ ಚಿನ್ನಜೀಯರ್ ಮಠದಲ್ಲಿ ಸಾವಿರಾರು ಭಕ್ತರಿಗೆ ಸಿಹಿಪಾಯಸದೊಂದಿಗೆ ಅನ್ನದಾನ ಮಾಡಲಾಯಿತು. ನರಕ ಚತುರ್ದಶಿ ಉತ್ಸವವನ್ನು ಸವಿತಾ ಸಮಾಜದವರು ತಮ್ಮ ಗುರುಗಳ ನೇತೃತ್ವದಲ್ಲಿ ವೈಭವದಿಂದ ನಡೆಸಿದರು. ದೀಪಾವಳಿಯ ಮೂರು ದಿನಗಳಂದು ಮೇಲುಕೋಟೆಗೆ ಭಕ್ತಸಾಗರವೇ ಹರಿದುಬಂದಿತ್ತು

ಅಡ್ಡಾದಿಡ್ಡಿಯಾಗಿ ನಿಂತ ವಾಹನ ಉತ್ಸವಕ್ಕೆ ತೊಂದರೆ:

ಸಾವಿರಾರು ಭಕ್ತರು ಆಗಮಿಸಿದ ಹಿನ್ನೆಲೆ ಭಕ್ತರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್‌ ಮಾಡಿದ್ದರಿಂದ ಚೆಲುವನಾರಾಯಣಸ್ವಾಮಿಯ ಉತ್ಸವಕ್ಕೇ ತೊಂದರೆಯಾಯಿತು. ಶನಿವಾರ ರಾತ್ರಿ ರಸ್ತೆಯ ಎರಡೂ ಬದಿ ಭಕ್ತರು ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿ ದರ್ಶನಕ್ಕೆ ಹೋಗಿದ್ದರಿಂದ ಸ್ವಾಮಿಯ ಶೇಷವಾಹನೋತ್ಸವ ಸುಗಮವಾಗಿ ಸಾಗಲು ಅಡ್ಡಿಯಾಯಿತು. ಶ್ರೀಪಾದ ಮತ್ತು ಬಂಡಿಕಾರರು ಪ್ರಯಾಸ ಪಡುವಂತಾಯಿತು. ಈ ಹಿಂದೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರಾಥಮಿಕ ಆರೋಗ್ಯಕೇಂದ್ರದ ಮೈದಾನದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದ್ದರೂ ಸಂಬಂಧಿಸಿದವರು ಪಾಲಿಸದ ಕಾರಣ ದೇವಾಲಯದ ಸುತ್ತ ವಾಹನ ದಟ್ಟಣೆ ಉಂಟಾಗಿತ್ತು. ಗ್ರಾಪಂ ಈ ಬಗ್ಗೆ ಗಮನ ಹರಿಸಬೇಕಿದೆ.