ವೈಭವದ ಗುಡಿಸರಗೂರು ಜಾತ್ರೆ

| Published : Feb 13 2025, 12:46 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಗುಡಿಸರಗೂರು ಬಸವೇಶ್ವರ ಸ್ವಾಮಿ ಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಕಳಶ ಹೊತ್ತ ಅರ್ಚಕರು ಕೊಂಡ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿದರು.

ಚನ್ನಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಗುಡಿಸರಗೂರು ಬಸವೇಶ್ವರ ಸ್ವಾಮಿ ಕೊಂಡೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಕಳಶ ಹೊತ್ತ ಅರ್ಚಕರು ಕೊಂಡ ಪ್ರವೇಶಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿದರು.

ಗುಡಿಸರಗೂರು ಜಾತ್ರಾ ಮಹೋತ್ಸವಕ್ಕೆ ಸೋಮವಾರದಿಂದಲೆ ಪೂಜಾಕಾರ್ಯಗಳು ಆರಂಭಿಸಲಾಗಿತ್ತು. ವಿವಿಧ ಗ್ರಾಮಗಳ ಭಕ್ತರು ಕೊಂಡಕ್ಕೆ ಸೌದೆ ತಂದು ಹಾಕಿದ್ದರು. ೩೦ ಅಡಿ ಉದ್ದದ ಕೊಂಡದ ಹಳ್ಳಕ್ಕೆ ೨೦ ಅಡಿಯಷ್ಟು ಎತ್ತರದಲ್ಲಿ ಸೌದೆ ಜೋಡಿಸಲಾಗಿತ್ತು. ರಾತ್ರಿ ಪೂರ್ತಿ ಸೌದೆ ಉರಿಸಿ ಕೆಂಡ ಮಾಡಿ, ಕೆಂಡ ತುಂಬಿದ ಕೊಂಡದ ಗುಂಡಿ ಸುತ್ತ ಬಸವನ ಪ್ರದಕ್ಷಿಣೆ ಮಾಡಿದ ಬಳಿಕ ದೇಗುಲದ ಪೂಜಾರಿ ಕಳಶ ಹೊತ್ತು ಬರಿಗಾಲಿನಲ್ಲಿ ಕೊಂಡ ಹಾಯುವುದು ಇಲ್ಲಿಯ ಪದ್ಧತಿ. ಸರಗೂರು ಸುತ್ತಮುತ್ತಲ ೨೮ ಹಳ್ಳಿಗಳಲ್ಲೂ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಗ್ರಾಮದೇವರಾದ ಬಸವೇಶ್ವರಸ್ವಾಮಿ ಬಳಿ ರಾಸುಗಳ ಒಳಿತಿಗಾಗಿ ಭಕ್ತರು ಹರಕೆ ಹೊರುವುದು, ರಾಸುಗಳಿಗೆ ಕೆಡಕುಂಟಾದಾಗ ಬಸವೇಶ್ವರನ ನೆನೆದು ಕೊಂಡಕ್ಕೆ ಹರಳು ಹಾಕುತ್ತಾರೆ. ರಾಸುಗಳು ಗುಣಮುಖವಾದಾಗ ಹಬ್ಬದ ದಿನದಂದು ಕೊಂಡಕ್ಕೆ ಹರಳು ಹಾಕುವುದು, ಸೌದೆ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಜಾತ್ರೆಯಲ್ಲಿ ಜಾನಪದ ಕಲಾವಿದರಿಂದ ಕೋಲಾಟ, ಕೀಲು ಕುದುರೆ, ತಮಟೆ ಕುಣಿತ, ಒನಕೆ ಕುಣಿತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹರಕೆ ಹೊತ್ತ ಭಕ್ತಾದಿಗಳಿಗೆ ಬಾಯಿಬೀಗ, ಪಾನಕದ ಬಂಡಿ ಉತ್ಸವ, ರಥೋತ್ಸವ, ಸಂಜೆ ೪ ಗಂಟೆಗೆ ತೆಪೋತ್ಸವ ನಡೆಯಿತು. ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪೋಟೊ೧೧ಸಿಪಿಟಿ೧:

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕೊಂಡಹಾಯ್ದ ಅರ್ಚಕರು.

ಪೋಟೊ೧೧ಸಿಪಿಟಿ೨:

ಗುಡಿಸರಗೂರು ಗ್ರಾಮದ ಇತಿಹಾಸ ಪ್ರಸಿದ್ಧ ಬಸವೇಶ್ವರಸ್ವಾಮಿ.