ಜಿ.ಎಂ. ಶಾಲೆಯಲ್ಲಿ ಕಲೆ, ವಿಜ್ಞಾನ ಮಾದರಿ ಪ್ರದರ್ಶನ

| Published : Jan 01 2025, 12:00 AM IST

ಸಾರಾಂಶ

ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಮಾದರಿ, ಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನು ಇತ್ತೀಚೆಗೆ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ವಿಜ್ಞಾನ ಮಾದರಿ, ಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನವನ್ನು ಇತ್ತೀಚೆಗೆ ಆಯೋಜಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜೆಸಿಐನ ಸೆನೆಟರ್, ರಾಷ್ಟ್ರೀಯ ತರಬೇತುದಾರ ರಾಜೇಶ್ ಡಿ. ಶೆಣೈ ಆಗಮಿಸಿದ್ದರು. ಅವರು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ನೀವೆಲ್ಲರೂ ಇಂದು ವಿಜ್ಞಾನಿಗಳಾಗಿ ಕಾಣುತ್ತಿದ್ದೀರಿ. ತಾವೆಲ್ಲರೂ ವಿಜ್ಞಾನ ಮಾದರಿಗಳನ್ನು ತಯಾರಿಸಲು ಮೊದಲು ಪೂರ್ವ ಯೋಜನೆಗಳನ್ನು ಮಾಡಿ ವೈಜ್ಞಾನಿಕ ದೃಷ್ಟಿ ಕೋನದಲ್ಲಿ ವಸ್ತುಗಳನ್ನು ಸಂಗ್ರಹಿಸಿ, ಮಾದರಿಯನ್ನು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದೀರಿ. ಇಲ್ಲಿ ಪಡೆದ ಅನುಭವದಿಂದ ಮುಂದಿನ ದಿನಗಳಲ್ಲಿ ಅತ್ಯದ್ಭುತವನ್ನು ಸೃಷ್ಟಿಸಲಿದ್ದೀರಿ. ಈಗ ನೀವು ಸಾಕಷ್ಟು ಕುತೂಹಲವನ್ನು ಹೊಂದಿದ್ದರೆ ಆವಿಷ್ಕಾರದ ಮೂಲ ಏನು ಎಂದು ಕಂಡುಹಿಡಿಯಬಹುದು ಎಂದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ನಮ್ಮ ಮೊದಲ ಹೆಜ್ಜೆ ಯಾವಾಗಲೂ ಅತ್ಯುತ್ತಮವಾಗಿರಬೇಕು. ಮಹತ್ತರ ಗುರಿಯೊಂದಿಗೆ ಇಟ್ಟ ಮೊದಲ ಹೆಜ್ಜೆಯಲ್ಲಿ ಸೋತರೂ ಅದರ ಬಗ್ಗೆ ಚಿಂತಿಸಬಾರದು. ನನ್ನಿಂದ ಎಲ್ಲವೂ ಸಾಧ್ಯವೆನ್ನುವ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನುಗ್ಗಬೇಕು ಎಂದು ಹೇಳಿದರು.ವಿದ್ಯಾರ್ಥಿಗಳ ಕಲಾಕುಂಚದಲ್ಲಿ ಅರಳಿದ ಚಿತ್ತ ಚಿತ್ತಾರಗಳು, ನೂತನ ವಿಜ್ಞಾನ ಮಾದರಿಗಳು, ಕರಕುಶಲ ವಸ್ತುಗಳನ್ನು ವಸ್ತುಪ್ರದರ್ಶನದಲ್ಲಿ ಇರಿಸಲಾಗಿದ್ದು, ಪೋಷಕರಿಗೆ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ವಸ್ತು ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.