ಕೇಂದ್ರ, ರಾಜ್ಯ ಸರ್ಕಾರಗಳ ಸೌಲಭ್ಯ ಪಡೆಯಲು ಮುಂದಾಗಿ

| Published : Feb 24 2024, 02:33 AM IST

ಕೇಂದ್ರ, ರಾಜ್ಯ ಸರ್ಕಾರಗಳ ಸೌಲಭ್ಯ ಪಡೆಯಲು ಮುಂದಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ನಿತ್ಯ ಬಿಸಿಲು, ಮಳೆ, ಗಾಳಿ ಎನ್ನದೇ ದುಡಿಮೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರ ನೆಮ್ಮದಿ ಬದುಕಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸದುಪಯೋಗ ಮೂಲಕ ಕುಟುಂಬ ವರ್ಗಕ್ಕೆ ಸದೃಢ ಬದುಕನ್ನು ಕಟ್ಟಿಕೊಡುವಂತೆ ಸಂಸದ ಬಿ.ವೈ. ರಾಘವೇಂದ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಕಟ್ಟಡ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ನಿತ್ಯ ಬಿಸಿಲು, ಮಳೆ, ಗಾಳಿ ಎನ್ನದೇ ದುಡಿಮೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಮಿಕರ ನೆಮ್ಮದಿ ಬದುಕಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳ ಸದುಪಯೋಗ ಮೂಲಕ ಕುಟುಂಬ ವರ್ಗಕ್ಕೆ ಸದೃಢ ಬದುಕನ್ನು ಕಟ್ಟಿಕೊಡುವಂತೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶುಕ್ರವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ತಾಲೂಕು ಆಡಳಿತ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.

ಕಟ್ಟಡ ನಿರ್ಮಾಣ ಕಾಮಗಾರಿ ಕಾರ್ಮಿಕರು ಅತ್ಯಂತ ಶ್ರಮಜೀವಿಯಾಗಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸದೇ ಶ್ರಮದ ದುಡಿಮೆ ಮೂಲಕ ಕುಟುಂಬದ ಆರೋಗ್ಯಕ್ಕಾಗಿ ತೊಡಗಿಸಿಕೊಂಡಿದ್ದಾರೆ. ಅಪಾಯಕರ ವೃತ್ತಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಹಲವು ಬಾರಿ ಅಂಗವೈಕಲ್ಯ ಜತೆಗೆ ಜೀವಹಾನಿಗೆ ಒಳಗಾಗಿರುವ ಸಂಭವ ಅಧಿಕವಾಗಿದೆ. ಈ ದಿಸೆಯಲ್ಲಿ ಕಾರ್ಮಿಕರ ಆರೋಗ್ಯಕ್ಕಾಗಿ ಗುಣಮಟ್ಟದ ಚಿಕಿತ್ಸೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಯನ್ನು ಜಾರಿಗೊಳಿಸಿದೆ. ಕಾರ್ಮಿಕರು ನಿರ್ಲಕ್ಷಿಸದೇ ಎಲ್ಲ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣ ಪಡೆದು ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವ ದಿಸೆಯಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಸದುಪಯೋಗದ ಮೂಲಕ ಉನ್ನತ ಶಿಕ್ಷಣ ಪಡೆಯುವಂತೆ ತಿಳಿಸಿದರು.

ಕಾರ್ಮಿಕ ಇಲಾಖೆ ವತಿಯಿಂದ ವಿತರಿಸಲಾಗುವ ಕಾರ್ಮಿಕರ ಕಾರ್ಡ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಯನ್ನು ರೂಪಿಸಿ ಜಾರಿಗೊಳಿಸಿ, ಕಾರ್ಮಿಕರ ಹಿತಕ್ಕಾಗಿ ಹೆಚ್ಚಿನ ಗಮನ ನೀಡಲಾಗಿದೆ. ಈ ದಿಸೆಯಲ್ಲಿ ಕಾರ್ಮಿಕರ ಕಾರ್ಡ್‌ ಅನರ್ಹರ ಪಾಲಾಗದಂತೆ ಜಾಗೃತಿ ವಹಿಸುವಂತೆ ಸೂಚಿಸಿದರು.

ಪ್ರಧಾನಿ ಮೋದಿ ಜನಧನ ಕಾರ್ಯಕ್ರಮ ಮೂಲಕ 40 ಕೋಟಿ ಜನತೆಗೆ ಬ್ಯಾಂಕ್ ಖಾತೆ ತೆರೆದು ರೈತರಿಗೆ, ಕೂಲಿ ಕಾರ್ಮಿಕರಿಗೆ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ಮತ್ತಿತರ ಹಲವು ಯೋಜನೆಗಳ ಸಬ್ಸಿಡಿಯನ್ನು ಖಾತೆಗೆ ನೇರವಾಗಿ ಜಮಾಗೊಳಿಸುವ ಮೂಲಕ ಜನಸಾಮಾನ್ಯರಿಗೆ ಯೋಜನೆಯನ್ನು ನೇರವಾಗಿ ತಲುಪಿಸುವ ರೀತಿಯಲ್ಲಿ ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು.

ಇಲಾಖೆ ವತಿಯಿಂದ 55 ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸೌಲಭ್ಯ ವಿತರಿಸಲಾಯಿತು. ಕಾರ್ಮಿಕ ಇಲಾಖೆ ಅಧಿಕಾರಿ ಸುಮ, ಸುಕೀತಾ ಕಟ್ಟಡ ಹಾಗೂ ಇತರೇ ಕಾರ್ಮಿಕರ ಸಂಘದ ಜಿಲ್ಲಾ ಗೌರವಾದ್ಯಕ್ಷ ಮಹದೇವಾಚಾರ್, ಜಿಲ್ಲಾಧ್ಯಕ್ಷ ಸಂಜೀವ್, ಕಾರ್ಯಾಧ್ಯಕ್ಷ ಸುಂದರಬಾಬು, ತಾಲೂಕು ಘಟಕದ ಅಧ್ಯಕ್ಷ ಮುನಿರತ್ನ, ಶಿರಾಳಕೊಪ್ಪ ಘಟಕದ ಅಧ್ಯಕ್ಷ ತಿರುಪತಿ, ರೂಪ, ರಮೇಶ್ ನಾಯ್ಕ್, ಸಲೀಂ ಮತ್ತಿತರರು ಹಾಜರಿದ್ದರು.

- - - -23ಕೆಎಸ್.ಕೆಪಿ1:

ಶಿಕಾರಿಪುರ ತಾಪಂ ಸಭಾಂಗಣದಲ್ಲಿ ಶುಕ್ರವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಮಕ್ಕಳಿಗೆ ಸಂಸದ ರಾಘವೇಂದ್ರ ಲ್ಯಾಪ್‌ಟಾಪ್ ಸೌಲಭ್ಯ ವಿತರಿಸಿದರು.