ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಿ

| Published : Nov 11 2024, 12:45 AM IST / Updated: Nov 11 2024, 12:46 AM IST

ಸಾರಾಂಶ

ಶಾಲಾ ಮಕ್ಕಳೇ ಸಮಾಜ ವಿದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರ ಹಿಂದೆ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯದಿರುವುದೇ ಕಾರಣ.

ಕನ್ನಡಪ್ರಭ ವಾರ್ತೆ ತುಮಕೂರು

ಶಾಲಾ ಮಕ್ಕಳೇ ಸಮಾಜ ವಿದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದರ ಹಿಂದೆ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯದಿರುವುದೇ ಕಾರಣ. ಹಾಗಾಗಿ ಸರಕಾರ ಮಕ್ಕಳ ಮನಸ್ಸನ್ನು ಅರಳಿಸುವ ಸಂಗೀತ ಮತ್ತು ಚಿತ್ರಕಲಾ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಲೋಟಸ್ ಕನ್ವೆಂಷನ್ ಹಾಲ್‌ನಲ್ಲಿ ಹಿರಿಯ ಗಾಯಕ ಈಶ್ವರ್ ಅವರ ಸವಿನೆನಪಿನಲ್ಲಿ ಹಮ್ಮಿಕೊಂಡಿದ್ದ ರಮ್ಯಗಾನ ಸ್ನೇಹ ಸಂಗಮ ಆರ್ಕೆಸ್ಟ್ರಾ ಗಾಯಕ ಸಮ್ಮೀಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಾಲಾ, ಕಾಲೇಜುಗಳಲ್ಲಿಯೇ ಸಂಗೀತ ಮತ್ತು ಚಿತ್ರಕಲೆ ಹೇಳಿಕೊಡುವು ದರಿಂದ ಅವರಲ್ಲಿ ಏಕಾಗ್ರತೆ ಹೆಚ್ಚಾಗುವುದಲ್ಲದೆ, ಆತ್ಮಸ್ಥೈರ್ಯ ಮೂಡಿಸಲು ಸಹಕಾರಿಯಾಗತ್ತದೆ ಎಂದರು.

ನಾಡಿನ ಪ್ರಸಿದ್ದ ಗಾಯಕರೆನಿಸಿಕೊಂಡಿರುವ ಅನೇಕರು ಮೊದಲು ವೇದಿಕೆ ಹತ್ತಿದ್ದು ನಿಮ್ಮಂತಹ ಆರ್ಕೇಸ್ಟ್ರಾ ತಂಡಗಳ ಮೂಲಕವೇ, ಆರ್ಕೆಸ್ಟ್ರಾ ಕಲಾವಿದರು ತಮ್ಮ ಗಾಯನದ ಜೊತೆಗೆ, ಲಯ, ತಾಳಗಳಿಗೆ ಬದ್ದವಾಗಿ, ಭಾವಾಭಿನಯ ವನ್ನು ರೂಢಿಸಿಕೊಂಡರೆ ಪ್ರೇಕ್ಷಕರಿಗೆ ಮತ್ತಷ್ಟು ರಸಾನುಭವವನ್ನು ನೀಡಬಹುದು. ಜಿಲ್ಲಾಡಳಿತಗಳಿಂದ ನಡೆಯುವ ದಸರಾ ದಂತಹ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಸ್ಥಳೀಯ ಇಂತಹ ಕಲಾವಿದರಿಗೆ ಅವಕಾಶ ಮಾಡಿಕೊಟ್ಟಲ್ಲಿ, ಅವರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅಲ್ಲದೆ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿ ಯಾಗುತ್ತದೆ ಎಂದು ಮುರುಳೀಧರ ಹಾಲಪ್ಪ ನುಡಿದರು.

ಗಾಯಕ ಗಂಗಾಧರ ಮಾತನಾಡಿ, ಮಕ್ಕಳು ಅಂಕಗಳ ಹಿಂದೆ ಬಿದ್ದು, ತಮ್ಮ ಸಾಂಸ್ಕೃತಿಕ ಬದುಕನ್ನೇ ಮರೆತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ಕನ್ನಡ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸುವ ಮೂಲಕ ಮಕ್ಕಳಿಗೆ ಸಾಹಿತ್ಯದ ಜೊತೆಗೆ, ಸಂಗೀತದ ಕಲಿಕೆಗೆ ಮುಂದಾಗುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಗಾಯಕರಾದ ಕುವೆಂಪು ಪ್ರಕಾಶ್, ರಮ್ಯ ಈಶ್ವರ್, ಈಶ್ವರ್ ದಲಾ ಚಿದಾನಂದ್, ಮುರುಳಿ, ಅಪ್ಪಾಜಿ,ನರಸಿಂಹಮೂರ್ತಿ ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ನೂರಾರು ಅಕೇಸ್ಟ್ರಾ ಕಲಾವಿದರು ಪಾಲ್ಗೊಂಡಿದ್ದರು.