ಕಾಡು,ವನ್ಯಜೀವಿ ಸಂರಕ್ಷಣೆಗೆ ಮುಂದಾಗಿ

| Published : Oct 09 2024, 01:49 AM IST / Updated: Oct 09 2024, 01:50 AM IST

ಸಾರಾಂಶ

ಕಾಡುಗಳ ಸಂರಕ್ಷಣೆಯಂತೆ ವನ್ಯಜೀವಿಗಳ ಸಂರಕ್ಷಣೆಯೂ ನಮ್ಮ ಹೊಣೆಯಾಗಬೇಕು

ಮುಂಡರಗಿ: ಕಾಡಿನಲ್ಲಿರುವ ಮರಗಳು ಆಮ್ಲಜನಕದ ಖಜಾನೆಗಳಾದರೆ, ಕಾಡುಗಳು ವನ್ಯ ಜೀವಿಗಳ ಸಂರಕ್ಷಕಗಳು. ವನ್ಯಜೀವಿಗಳು ಕಾಡಿನಲ್ಲಿದ್ದರೆ ಕಾಡಿನ ಅಂಧ ಹೆಚ್ಚುವುದು. ಆದ್ದರಿಂದ ಕಾಡುಗಳ ಸಂರಕ್ಷಣೆಯ ಜತೆಗೆ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು. ಮರಗಳು ಮತ್ತು ವನ್ಯಜೀವಿಗಳು ಕಾಡಿನ ಆಭರಣಗಳು ಎಂದು ಗದಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ ಸಿ.ಎಸ್. ಅರಸನಾಳ ಹೇಳಿದರು.

ಅವರು ಮಂಗಳವಾರ ಅರಣ್ಯ ಇಲಾಖೆ ಗದಗ ಮತ್ತು ಮುಂಡರಗಿ ವಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಹಮ್ಮಿಕೊಂಡಿದ್ದ 70ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ವನ್ಯಜೀವಿ ಸಂಕುಲ ಮಾನವ ಸಂಗದಿಂದ ಪ್ರತ್ಯೇಕ ಇರ ಬಯಸುತ್ತವೆ. ಆದುದರಿಂದ ಮಾನವ ಮತ್ತು ವನ್ಯಜೀವಿಗಳ ಮಧ್ಯ ಸಂಘರ್ಷ ಹೆಚ್ಚಾಗುತ್ತಿದೆ. ಮಾನವ ವನ್ಯಜೀವಿಗಳ ಜತೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಸಹ ಅಸ್ತಿತ್ವದ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು. ಕೇವಲ ಶೇ. 21.9 ಅರಣ್ಯ ಪ್ರದೇಶ ನಮ್ಮಲ್ಲಿದೆ. ಅದು ಶೇ. 33ಕ್ಕೂ ಅಧಿಕವಾದರೆ ವನ್ಯಜೀವಿಗಳು ಸ್ವಚ್ಛಂದವಾಗಿ ಕಾಡಿನಲ್ಲಿ ಬದುಕುತ್ತವೆ. ಕಾಡುಗಳಲ್ಲಿ ವನ್ಯಜೀವಿಗಳು ಬದುಕಲು ಬೇಕಾಗಿರುವ ಮೂಲಭೂತ ಅವಶ್ಯಕತೆ ಪೂರೈಸುವ ಕೆಲಸವಾಗಬೇಕು ಎಂದರು.

ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಡುಗಳ ಸಂರಕ್ಷಣೆಯಂತೆ ವನ್ಯಜೀವಿಗಳ ಸಂರಕ್ಷಣೆಯೂ ನಮ್ಮ ಹೊಣೆಯಾಗಬೇಕು. ವನ್ಯಜೀವಿಗಳು ಕಾಡುಬಿಟ್ಟು ನಾಡಿಗೆ ಬರದ ಹಾಗೇ ಕಾಡಿನಲ್ಲಿಯೇ ಅವುಗಳಿಗೆ ಬೇಕಾಗುವ ವ್ಯವಸ್ಥೆ ಮಾಡುವುದು ಸೂಕ್ತ. ಬಸವಾದಿ ಶರಣರು 12ನೇ ಶತಮಾನದಲ್ಲಿಯೇ ಪ್ರಾಣಿ ಮತ್ತು ಮರಗಳ ರಕ್ಷಣೆಗೆ ಮಹತ್ವ ಕೊಟ್ಟಿದ್ದರು ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮತ್ತು ತಹಸೀಲ್ದಾರ್‌ ಎರ್ರಿಸ್ವಾಮಿ ಪಿ.ಎಸ್ ಮಾತನಾಡಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಖ್ಯಾತವಾಗಿರುವ ಕಪ್ಪತಗುಡ್ಡ ನಮ್ಮೆಲ್ಲರಿಗೆ ಸಂಜೀವಿನಿಯಾಗಿದೆ.ಅಲ್ಲಿಯ ಪ್ರಾಣಿ-ಪಕ್ಷಿಗಳ ಸಂರಕ್ಷಣೆಯ ಜತೆಗೆ ಮರಗಿಡ, ಅಲ್ಲಿನ ನೂರಾರು ಔಷಧಿ ಸಸ್ಯ ಕಾಪಾಡುವ ಮೂಲಕ ಕಾಳಜಿ ವಹಿಸಿ ಬೆಳೆಸಬೇಕು. ಗದಗ ಜಿಲ್ಲೆಯಲ್ಲಿ ಕಪ್ಪತಗುಡ್ಡ ಇರುವುದರಿಂದಲೇ ಪರಿಶುದ್ಧ ಗಾಳಿಗೆ ಇಡೀ ಏಷಿಯಾದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಉರಗ ತಜ್ಞ ಜಲಾಲಸಾಬ್‌ ಕೊಪ್ಪಳ, ಫಿರೋಜಖಾನ್ ಘೋರಿ ಮತ್ತು ವನ್ಯಜೀವಿ ಛಾಯಾಚಿತ್ರಗಾರ ಸುನೀಲ ಯಾಳಗಿ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ, ಪ್ರಭಾರ ಎಸಿಎಫ್ ವಿರೇಂದ್ರ ಮರಿಬಸಣ್ಣವರ, ಸಿಪಿಐ ಮಂಜುನಾಥ ಕುಸುಗಲ್, ಕಪ್ಪತಹಿಲ್ಸ್‌ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ ಬಿ.ಎಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅರುಣಾ ಸೋರಗಾವಿ ಮತ್ತು ಕಪ್ಪತ್ ಹಿಲ್ಸ್ ವಲಯ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕೊಂಚಿಗೇರಿ ಕಲಾವಿದರು ಪರಿಸರ ಗೀತೆ ಹಾಡಿದರು. ಶಿರಹಟ್ಟಿ ಆರ್.ಎಫ್.ಓ ರಾಮಣ್ಣ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಎಚ್. ಜಂಗಣವಾರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜರುಗಿದ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಕಪ್ಪತಗುಡ್ಡದ 10ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಾಡಬೇಕೆಂದಿರುವ ಗಣಿಗಾರಿಕೆಯ ೨೮ ಪ್ರಸ್ತಾವನೆ ಮುಂದೂಡಿದ್ದು ಸ್ವಾಗತಾರ್ಹ. ಕಪ್ಪತಗುಡ್ಡದಲ್ಲಿ ಯಾವ ಕಾಲಕ್ಕೂ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಕೇಂದ್ರ ಸರ್ಕಾರದ ಪರಿಸರ ಅರಣ್ಯ ಸಚಿವಾಲಯ ಕಪ್ಪತಗುಡ್ಡದ ವನ್ಯಜೀವಿ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕರಡು ಅದಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ ಎಂದು ಗದಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ ಸಿ.ಎಸ್. ಅರಸನಾಳ ತಿಳಿಸಿದ್ದಾರೆ.