ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಸಂದರ್ಭದಲ್ಲಿ ಗೋ ಬ್ಯಾಕ್ ಕೂಗು ಕೇಳಿ ಬರುತ್ತಿದೆ. 2019 ರಲ್ಲಿ ಕ್ಷೇತ್ರದಲ್ಲಿ ಜನ್ಮ ತಾಳಿದ ಈ ಕೂಗು, ಈ ಬಾರಿಯೂ ಕೂಡ ಪ್ರತಿಧ್ವನಿಯಾಗಿ ಕೇಳಿ ಬರುತ್ತಿದೆ.
ಕಳೆದ ಒಂದು ತಿಂಗಳಿಂದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವರದೇ ಪಕ್ಷದವರು ಗೋ ಬ್ಯಾಕ್ ಶೋಭಾ ಎಂಬ ಘೋಷಣೆಯೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದಾರೆ.
ಈ ಕೂಗು ಟಿಕೆಟ್ ಘೋಷಣೆವರೆಗೆ ಹೀಗೆಯೇ ಮುಂದುವರಿಯಲಿದೆ. ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ಅಂತಿಮ ತೆರೆ ಬೀಳಲಿದೆ.ಗೋ ಬ್ಯಾಕ್ ಘೋಷಣೆಯನ್ನು ಕಾಂಗ್ರೆಸ್ ಕಾಪಿ ಮಾಡಿಕೊಂಡಿದೆ.
ಗೋ ಬ್ಯಾಕ್ ಜಯಪ್ರಕಾಶ್ ಹೆಗ್ಡೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ, ಆದರೂ ಕೂಡ ಪಕ್ಷದ ಚಿಹ್ನೆಯ ಹೆಸರನ್ನು ಬಳಕೆ ಮಾಡಿಕೊಂಡು ಅವರ ವಿರುದ್ಧ ಪೋಸ್ಟ್ ಮಾಡಲಾಗಿದೆ.
ಕಷ್ಟ ಕಾಲದಲ್ಲಿ ಕೈ ಕೊಟ್ಟವರು ಈಗ ಬೇಡ, ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡಿ ಎಂದು ಸಹ ಉಲ್ಲೇಖಿಸಿದ್ದಾರೆ.
ಗೋ ಬ್ಯಾಕ್: ಗೋ ಬ್ಯಾಕ್ ಶೋಭಾ ಎಂಬುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿರುವ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾತ್ರವಲ್ಲ, ಮಾಜಿ ಸಿಎಂ ಯಡಿಯೂರಪ್ಪ ಸಹ ಹೇಳಿದ್ದರು.
ಈ ವಿಷಯದಲ್ಲಿ ಕೆಲವು ನಾಯಕರನ್ನು ಸಂಶಯದಿಂದ ನೋಡುವಂತೆ ಮಾತ್ರವಲ್ಲ, ಅಂತರ ಕಾಯ್ದು ಕೊಳ್ಳುವ ಬಗ್ಗೆಯೂ ಕೂಡ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ.
ಇದೇ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮನೆಯಲ್ಲೂ ಕಾಲಿಡಲಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಇದೇ ಮೊದಲ ಬಾರಿಗೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಹೊಸ ಬೆಳವಣಿಗೆಗೆ 2024ರ ಚುನಾವಣೆ ನಾಂದಿ ಹಾಡಿದೆ.
ಡಾ.ಕೆ.ಪಿ.ಅಂಶುಮಂತ್ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಒತ್ತಾಯ
ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ,ಪಿ.ಅಂಶುಮಂತ್ ಅವರಿಗೆ ಪಕ್ಷದ ಟಿಕೆಟ್ ನೀಡಬೇಕೆಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ಬಹುತೇಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡಲು ಒತ್ತಾಯಿಸಿರುವುದಾಗಿ ಮಂಜೇಗೌಡ ತಿಳಿಸಿದ್ದು, ರಾಜ್ಯದಿಂದ ದೆಹಲಿಗೆ ಕಳುಹಿಸಿರುವ ಪಟ್ಟಿಯಲ್ಲಿ ಡಾ.ಕೆ.ಪಿ.ಅಂಶುಮಂತ್ ಹೆಸರು ಸೇರಿರುವುದು ಸ್ವಾಗತಾರ್ಹ ವಾಗಿದೆ ಎಂದಿದ್ದಾರೆ.
ಕಳೆದ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೋವಿಡ್ ಸಂದರ್ಭದಲ್ಲೂ ಕೂಡ ಪಕ್ಷ ಸಾರ್ವಜನಿಕರ ಸಹಕಾರಕ್ಕೆ ಸದಾ ಮುಂದಾಗುವಂತೆ ನಾಯಕತ್ವ ನೀಡಿದ, ಅವರ ನೇತೃತ್ವದಲ್ಲಿ ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ತಿಳಿಸಿದ್ದಾರೆ.
ಸದಾ ಸಕ್ರೀಯರಾಗಿರುವ, ಆರ್ಥಿಕ ಸದೃಢತೆ ಹೊಂದಿರುವ ಡಾ.ಕೆ.ಪಿ.ಅಂಶುಮಂತ್ ಅವರಿಗೆ ಲೋಕಸಭಾ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ.