ಗೋ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ದೇಶಪಾಂಡೆ

| Published : Jun 24 2024, 01:39 AM IST

ಸಾರಾಂಶ

ಗೋಶಾಲೆಯನ್ನು ಪರಿಶೀಲಿಸಿದ ದೇಶಪಾಂಡೆ ಗೋವುಗಳಿಗೆ ಹಣ್ಣುಗಳನ್ನು ತಿನ್ನಿಸಿದರು. ಗೋಶಾಲೆಯ ಅಭಿವೃದ್ಧಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಅಳವಡಿಸಲು ತಾಲೂಕು ಪಶು ವೈದ್ಯಾಧಿಕಾರಿಗೆ ಸೂಚಿಸಿದರು.

ಹಳಿಯಾಳ: ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ನೀಡಲಾಗಿದ್ದು, ಗೋ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯ ಎಂದು ರಾಜ್ಯ ಆಡಳಿ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಭಾನುವಾರ ತಾಲೂಕಿನ ದುಸಗಿ ಗ್ರಾಮದಲ್ಲಿರುವ ಸರ್ಕಾರದ ಜಿಲ್ಲಾ ಗೋಶಾಲೆಗೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಭಾರತದ ಚರಿತ್ರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜಿಸುತ್ತಿದ್ದು, ಗೋವುಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಅಂತಹ ಗೋವುಗಳಿಗೆ ವಯಸ್ಸಾಗುತ್ತಿದ್ದಂತೆ ಅಮಾನವೀಯವಾಗಿ ನಡೆದುಕೊಳ್ಳುವದು ಸರಿಯಲ್ಲ. ಅದು ಮಾನವೀಯತೆಯೂ ಅಲ್ಲ ಎಂದರು.

ಗೋಶಾಲೆ ಪರಿಶೀಲನೆ: ಜಿಲ್ಲಾ ಗೋಶಾಲೆಯನ್ನು ಪರಿಶೀಲಿಸಿದ ದೇಶಪಾಂಡೆ ಗೋವುಗಳಿಗೆ ಹಣ್ಣುಗಳನ್ನು ತಿನ್ನಿಸಿದರು. ಗೋಶಾಲೆಯ ಅಭಿವೃದ್ಧಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಅಳವಡಿಸಲು ತಾಲೂಕು ಪಶು ವೈದ್ಯಾಧಿಕಾರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೋಶಾಲೆಯ ಸಮಗ್ರ ಮಾಹಿತಿಯನ್ನು ನೀಡಿದ ಡಾ. ಕೆ.ಎಂ. ನದಾಫ ಜಿಲ್ಲಾ ಗೋಶಾಲೆಯಲ್ಲಿ 100 ಗೋವುಗಳನ್ನು ಸಾಕಲು ಅವಕಾಶವಿದೆ. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುವ ಹಾಗೂ ಇನ್ನಿತರ ಬಿಡಾಡಿ ಜಾನುವಾರುಗಳನ್ನು ಪೊಲೀಸರು ಹಿಡಿದು ಇಲ್ಲಿ ಸೇರಿಸಿದ್ದಾರೆ. ಇದರಿಂದ ಗೋಶಾಲೆಯಲ್ಲಿ ಜಾನುವಾರುಗಳ ಸಂಖ್ಯೆ 139 ಆಗಿದೆ. ಅವುಗಳಿಗೆ ಸರಿಯಾಗಿ ಸಾಕಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇನ್ನೂ ಹೆಚ್ಚುವರಿ ಶೆಡ್‌ಗಳ ನಿರ್ಮಾಣಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆಯನ್ನು ಕಳಿಸಲಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಸುಭಾಸ, ಜಿಪಂ ಮಾಜಿ ಉಪಾಧ್ಯಕ್ಷ ಸಂತೋಷ ರೇಣಕೆ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಸತ್ಯಜಿತ ಗಿರಿ, ಎಸ್.ಜಿ. ಮಾನಗೆ, ಗೌಡಕ್ಕನವರ ಹಾಗೂ ಗ್ರಾಮೀಣ ಮುಖಂಡರು ಇದ್ದರು.