ಮನೆ ಮನೆಗೆ ತೆರಳಿ ಗ್ಯಾರಂಟಿ ಲಾಭ ತಲುಪಿಸಿ: ಸೌಮ್ಯ ರೆಡ್ಡಿ ಕರೆ

| Published : Jul 04 2025, 11:47 PM IST

ಸಾರಾಂಶ

ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹಾಗೂ ಪದಾಧಿಕಾರಿಗಳಿಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಪದಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಮಹಿಳಾ ಕಾಂಗ್ರೆಸ್ ಪ್ರತಿ ಮನೆಮನೆಗೆ ತೆರಳಿ ಮಾಹಿತಿ ನೀಡಿ, ಪ್ರತಿಯೊಂದು ಕುಟುಂಬಕ್ಕೂ ಈ ಯೋಜನೆಯ ಲಾಭ ತಲುಪಿಸಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಸೂಚಿಸಿದ್ದಾರೆ.ಅವರು ಶುಕ್ರವಾರ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹಾಗೂ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಮಾತನಾಡಿದರು.ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಿರಂತರ ಅಪಪ್ರಚಾರ ಮಾಡುತ್ತಿದೆ, ಹಲವು ವರ್ಷಗಳಿಂದ ಬಿಜೆಪಿ ರಾಜ್ಯದಲ್ಲಿ ಆಡಳಿತ ನಡೆಸಿದ್ದರೂ ಇಂತಹ ಭಾಗ್ಯಗಳನ್ನು ಜನರಿಗೆ ನೀಡಿಲ್ಲ, ಬದಲಾಗಿ ಜನರ ನಡುವೆ ಕೇವಲ ಜಾತಿ ಧರ್ಮದ ವಿಷ ಬೀಜ ಬಿತ್ತಿದ್ದರು. ಆದ್ದರಿಂದ ಉಡುಪಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಸಂಕಲ್ಪ, ಸಮರ್ಪಣೆ, ಸಂಘರ್ಷದ ಮೂಲಕ, ಕರಾವಳಿಯನ್ನು ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಪಕ್ಷದ ಸಂಘಟನೆಗೊಳಿಸಬೇಕು ಎಂದರು.ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಪಕ್ಷ ಸಂಘಟನೆಯ ಬಗ್ಗೆ ಸಲಹೆ ನೀಡಿದರು.ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ, ಸರಳಾ ಕಾಂಚನ್, ಲಾವಣ್ಯ ಬಲ್ಲಾಳ್, ಮಮತಾ ಗಟ್ಟಿ, ಹರೀಶ್ ಕಿಣಿ, ದಿನಕರ ಹೇರೂರು, ರಮೇಶ್ ಕಾಂಚನ್, ವೆರೋನಿಕಾ ಕರ್ನೆಲಿಯೋ, ಕೃಷ್ಣ ಶೆಟ್ಟಿ ಬಜಗೋಳಿ ಹಾಗೂ ಇತರರು ಉಪಸ್ಥಿತರಿದ್ದರು.

ಮಹಿಳಾ ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು. ಸತೀಶ್ ಕೊಡವೂರು ಹಾಗೂ ಸುಚರಿತಾ ಕಾಪು ನಿರೂಪಿಸಿದರು.