ಮಂಡ್ಯ ನಗರಕ್ಕೆ ಗೊ.ರು.ಚನ್ನಬಸಪ್ಪ ಭೇಟಿ, ಭವ್ಯ ಸ್ವಾಗತ

| Published : Dec 20 2024, 12:47 AM IST

ಸಾರಾಂಶ

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪ ನಗರಕ್ಕೆ ಭೇಟಿ ನೀಡಿದ ವೇಳೆ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್, ರೋರ್ಸ್ ಸಂಸ್ಥೆ ವತಿಯಿಂದ ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪ ನಗರಕ್ಕೆ ಭೇಟಿ ನೀಡಿದ ವೇಳೆ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್, ರೋರ್ಸ್ ಸಂಸ್ಥೆಗಳ ಜಿಲ್ಲಾ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭವ್ಯ ಸ್ವಾಗತ ಕೋರಿದರು.

ನಗರದ ಮೈಸೂರು- ಬೆಂಗಳೂರು ಹೆದ್ದಾರಿಯ ಮೈಷುಗರ್ ವೃತ್ತ ಬಳಿ ಸೇರಿದ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್, ರೋರ್ಸ್ ಸಂಸ್ಥೆಗಳ ಜಿಲ್ಲಾ ಪದಾಧಿಕಾರಿಗಳು, ವಿದ್ಯಾರ್ಥಿಗಳು ಕನ್ನಡ ನಾಡು ನುಡಿ ಘೋಷಣೆಗಳನ್ನು ಕೂಗಿದರು.

ಬಳಿಕ ಮಾತನಾಡಿದ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿ.ಬಿ ಭಕ್ತವತ್ಸ, ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರು, ಹಲವು ದಶಕಗಳಿಂದ ಸಂಸ್ಥೆ ಪ್ರಧಾನ ಪೋಷಕರಾಗಿದ್ದಾರೆ. ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆ ಸಂಗತಿ.

ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರನ್ನು ಭವ್ಯವಾಗಿ ಸ್ವಾಗತಿಸಿದ್ದೇವೆ ಎಂದರು.

ಈ ವೇಳೆ ಸಂಸ್ಥೆ ಜಿಲ್ಲಾ ಗೈಡ್ಸ್ ಆಯುಕ್ತರಾದ ನಾಗಮ್ಮ, ಘಟಕದ ಪದಾಧಿಕಾರಿಗಳಾದ ಸೌಮ್ಯ ಲತಾ, ಪದ್ಮಾವತಿ, ಶಿವರಾಮೇಗೌಡ, ಶಭಾನಾ, ಜಗದಾಂಭ, ಪದ್ಮಾಶ್ರೀನಿವಾಸ್, ಗಾಯಿತ್ರಿ, ನಾಗೇಶ್, ರೋರ್ಸ್ ಮುಖ್ಯಸ್ಥ ಡಾ.ವೀರೇಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಸಾಹಿತ್ಯ ಸಮ್ಮೇಳನ ಸಮಾನಂತರ ವೇದಿಕೆ 1ರಲ್ಲಿ ನಡೆಯುವ ಗೋಷ್ಠಿಗಳು

ಮಂಡ್ಯ

ಮಧ್ಯಾಹ್ನ 2 ರಿಂದ 2.30 ರವರೆಗೆ ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಬಗ್ಗೆ ಮೊದಲ ಗೋಷ್ಠಿ ನಡೆಯಲಿದೆ. ಗದಗ ವಿದ್ಯಾನಿಧಿ ಪ್ರಕಾಶನ ಜಯದೇವ ಮೆಣಸಗಿ ಅಧ್ಯಕ್ಷತೆ ವಹಿಸಲಿದ್ದು, ಸಪ್ನ ಬುಕ್ ಹೌಸ್ ನ ದೊಡ್ಡೇಗೌಡ ಆಶಯ ನುಡಿಯಲಿದ್ದಾರೆ.

ಕೆ.ಎಲ್. ರಾಜಶೇಖರ್ ಅವರು ಮುದ್ರಣ ಕ್ಷೇತ್ರದ ತಲ್ಲಣಗಳು ವಿಷಯದ ಬಗ್ಗೆ, ಅಕ್ಷತಾ ಹುಂಚದಕಟ್ಟೆ-ಕನ್ನಡ ಪುಸ್ತಕಗಳು ಮತ್ತು ಓದುಗ ಬಳಗ, ವಸುಧೇಂದ್ರ - ಭವಿಷ್ಯದ ಪುಸ್ತಕೋದ್ಯಮ, ಅಶೋಕ ಕುಮಾರ್ - ಪ್ರಕಾಶಕರು ಹಾಗೂ ಮುದ್ರಕರು: ಸವಾಲುಗಳು ಮತ್ತು ಪರಿಹಾರಗಳು ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 3.30ರಿಂದ 6 ಗಂಟೆವರೆಗೆ ಸಂಕೀರ್ಣ ನೆಲೆಗಳು ವಿಷಯಗಳ ಎರಡನೇ ಗೋಷ್ಠಿಯಲ್ಲಿ ಹಿರಿಯ ಲೇಖಕ ಡಾ.ಎಲ್.ಹನುಮಂತಯ್ಯ ಅಧ್ಯಕ್ಷತೆ ವಹಿಸುವರು. ಪ್ರಾಧ್ಯಾಪಕ ಡಾ.ಜೆ. ಕರಿಯಪ್ಪ ಮಾಳಿಗೆ ಆಶಯ ನುಡಿ ನುಡಿಯಲಿದ್ದಾರೆ.

ಅನುವಾದ ಸಾಹಿತ್ಯ ವಿಷಯದ ಬಗ್ಗೆ- ಕೆ.ಮಲರ್ ವಿಳಿ ಅವರು, ಹಾಸ್ಯ ಸಾಹಿತ್ಯ- ವೈ.ವಿ. ಗುಂಡೂರಾವ್, ಸಾಹಿತ್ಯ ವಿಮರ್ಶೆಯ ದಿಕ್ಕು- ಡಾ.ಶಿವಾನಂದ ವಿರಕ್ತಮಠ, ವೈದ್ಯ ಸಾಹಿತ್ಯ- ಡಾ.ಎ.ಆರ್.ಸೋಮಶೇಖರ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಸಂಜೆ 7.30 ಗಂಟೆಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.