ಸಾರಾಂಶ
ಈಶ್ವರಪ್ಪ ಜೊತೆ ಟಿಕೆಟ್ ಅಸಮಾಧಾನ ಕುರಿತು ಚರ್ಚೆ ನಡೆಸಲಾಗಿದೆ. ಅವರನ್ನು ಮನವೊಲಿಸುವ ಪ್ರಯತ್ನ ನಡೆದಿದೆ. ಇನ್ನೂ ಸಮಯ ಮೀರಿಲ್ಲ. ನಾನು ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಿವಮೊಗ್ಗದಲ್ಲಿ ಹೇಳಿದ್ದಾರೆ. ಇನ್ನೂ ಚುನಾವಣೆ ಘೋಷಣೆ ಆಗಿಲ್ಲ. ಸಾಕಷ್ಟು ಬದಲಾವಣೆಗೆ ಅವಕಾಶ ಇದೆ. ಈಶ್ವರಪ್ಪ ಅವರಿಗೆ ಪದೇಪದೆ ಅನ್ಯಾಯ ಆಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದೂ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈಶ್ವರಪ್ಪ ಜೊತೆ ಟಿಕೆಟ್ ಅಸಮಾಧಾನ ಕುರಿತು ಚರ್ಚೆ ನಡೆಸಲಾಗಿದೆ. ಅವರನ್ನು ಮನವೊಲಿಸುವ ಪ್ರಯತ್ನ ನಡೆದಿದೆ. ಇನ್ನೂ ಸಮಯ ಮೀರಿಲ್ಲ. ನಾನು ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಶುಕ್ರವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಚುನಾವಣೆ ಘೋಷಣೆ ಆಗಿಲ್ಲ. ಸಾಕಷ್ಟು ಬದಲಾವಣೆಗೆ ಅವಕಾಶ ಇದೆ. ಈಶ್ವರಪ್ಪ ಅವರಿಗೆ ಪದೇಪದೆ ಅನ್ಯಾಯ ಆಗುತ್ತಿದೆ. ಇದನ್ನು ಸರಿಪಡಿಸಬೇಕು. ಅವರು ಪಕ್ಷದಲ್ಲಿ ಮುಂದುವರಿಯಬೇಕು. ಎಲ್ಲವೂ ಸರಿ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.ಈಶ್ವರಪ್ಪ ಮನೆಗೆ ಭೇಟಿ ನೀಡಿದ್ದೇನೆ. ಈಶ್ವರಪ್ಪ ನಮ್ಮ ಹಿರಿಯ ನಾಯಕರು. ಹಿಂದುಳಿದ ವರ್ಗಗಳ ನಾಯಕರು. ಅವರ ಜೊತೆ ರಾಜಕೀಯ ಚರ್ಚೆ ಮಾಡಿದ್ದು ನಿಜ. ಪಕ್ಷ ನಿರ್ಣಯ ತೆಗೆದುಕೊಂಡಿದೆ. ಯಾವುದೇ ಪರಿಸ್ಥಿತಿಯಲ್ಲಿ ಅದನ್ನು ಒಪ್ಪಿಕೊಳ್ಳಬೇಕು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಅನ್ಯಾಯ ಆಗಿದೆ. ಹಾಗಂತ ಹಿಂದುತ್ವದ ಪರ ದನಿ ಎತ್ತಿದವರಿಗೆಲ್ಲ ಅನ್ಯಾಯವಾಗಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಾವೇರಿ ಟಿಕೆಟ್ ಬಗ್ಗೆ ಅಭ್ಯರ್ಥಿ ಆಗಿರುವ ಬಸವರಾಜ್ ಬೊಮ್ಮಾಯಿ ಜೊತೆಗೂ ನಾನು ಮಾತನಾಡುತ್ತೇನೆ. ಅದನ್ನು ಮಾಧ್ಯಮದ ಮುಂದೆ ಹೇಳಲ್ಲ. ಪಕ್ಷದ ವೇದಿಕೆಯಲ್ಲಿ ಹೇಳುತ್ತೇನೆ. ಬೆಳಗಾವಿ ಟಿಕೆಟ್ ವಿಷಯದಲ್ಲೂ ಬದಲಾವಣೆ ಆಗಬೇಕಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯವರಿಗೆ ಟಿಕೆಟ್ ಕೊಡಬೇಕು ಎಂಬುದು ನಮ್ಮ ಮನವಿ. ಈ ವಿಷಯವನ್ನೂ ಪಕ್ಷದ ನಾಯಕರ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.- - - (-ಫೋಟೋ: ರಮೇಶ್ ಜಾರಕಿಹೊಳಿ)