ದಾವಣಗೆರೆಯನ್ನು ಐಟಿ-ಬಿಟಿ, ನವೋದ್ಯಮ ಹಾಗೂ ಕೈಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿಸಿ, ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಸ್ಥಳೀಯ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ, ದೇಶಿ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಜಿಲ್ಲೆಗೆ ಆಕರ್ಷಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
- ಸಂಸದೆ ಡಾ.ಪ್ರಭಾ ಹೇಳಿಕೆ । ನವೋದ್ಯಮಗಳ ಆಲೋಚನೆಗಳ ಪ್ರಸ್ತುತಿ ಕಾರ್ಯಕ್ರಮಕ್ಕೆ ಚಾಲನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯನ್ನು ಐಟಿ-ಬಿಟಿ, ನವೋದ್ಯಮ ಹಾಗೂ ಕೈಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿಸಿ, ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಸ್ಥಳೀಯ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ, ದೇಶಿ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಜಿಲ್ಲೆಗೆ ಆಕರ್ಷಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನವೋದ್ಯಮಗಳ ಆಲೋಚನೆಗಳ ಪ್ರಸ್ತುತಿ (ಸ್ಟಾರ್ಟಪ್ ಪಿಚ್ಚಿಂಗ್ ಸೆಷನ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಷನ್ ದಾವಣಗೆರೆ ತಂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಟೆಕ್ ಸಮ್ಮಿಟ್ನಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಪ್ರತಿ ವರ್ಷ ಇಲ್ಲಿಂದ ಸುಮಾರು 10 ಸಾವಿರ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಆದರೂ, ಐಟಿ-ಬಿಟಿ ಕ್ಷೇತ್ರದಲ್ಲಿ ಜಿಲ್ಲೆ ಅಭಿವೃದ್ಧಿ ಹೊಂದಿಲ್ಲ. ಸಂಸದೆಯಾದ ನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜೊತೆ ಚರ್ಚಿಸಿ, ಐಟಿ-ಬಿಟಿ ಅಭಿವೃದ್ಧಿಯ ಗುರಿ ಸಾಕಾರಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಒಂದೂವರೆ ವರ್ಷದಿಂದ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ನವೋದ್ಯಮಗಳ ಆಲೋಚನೆ ಪ್ರೋತ್ಸಾಹಿಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ 70ಕ್ಕೂ ಹೆಚ್ಚು ತಂಡ ಆಗಮಿಸಿರುವುದು ಸಂತಸದ ಸಂಗತಿ. ಆರಂಭದಲ್ಲಿ 30 ತಂಡ ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ, ಯುವಜನರ ಉತ್ಸಾಹ ನಿರೀಕ್ಷೆ ಮೀರಿದೆ. ಆರಂಭಿಕ ಹಂತದ ಆಲೋಚನೆಗಳನ್ನು ಉದ್ಯಮವಾಗಿ ರೂಪಿಸಲು ತಜ್ಞರ ಮಾರ್ಗದರ್ಶನ ನೀಡಲಾಗುವುದು. ಅಗತ್ಯ ಆರ್ಥಿಕ ನೆರವು ಮತ್ತು ಹೂಡಿಕೆದಾರರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುವುದು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದಲ್ಲಿ ಮುಂಬರುವ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ದಾವಣಗೆರೆಯ ಆಯ್ದ ನವೋದ್ಯಮಗಳಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಜಾಗತಿಕ ಹೂಡಿಕೆದಾರರು, ಉದ್ಯಮ ತಜ್ಞರು ಹಾಗೂ ತಂತ್ರಜ್ಞಾನ ಕಂಪನಿಗಳ ಪ್ರತಿನಿಧಿಗಳೊಂದಿಗೆ ನೇರ ಸಂವಾದಕ್ಕೆ ಅವಕಾಶ ಸಿಗಲಿದೆ ಎಂದು ವಿವರಿಸಿದರು.
ಬಿಐಇಟಿ ಮಾತ್ರವಲ್ಲದೇ ಜೈನ್ ಸಂಸ್ಥೆ, ದಾವಣಗೆರೆ ವಿವಿ, ಜಿಎಂಐಟಿ ಸೇರಿದಂತೆ ಜಿಲ್ಲೆಯ ಇತರ ಶೈಕ್ಷಣಿಕ ಸಂಸ್ಥೆಗಳಲ್ಲೂ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಕೆಎಸ್ಆರ್ಟಿಸಿ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ 1 ಲಕ್ಷ ಚದರಡಿಗೂ ಹೆಚ್ಚಿನ ಸ್ಥಳಾವಕಾಶ ಬಳಸಿ ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ) ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗಿದೆ. ದಾವಣಗೆರೆಯನ್ನು ತಂತ್ರಜ್ಞಾನ ಕ್ಲಸ್ಟರ್ ಆಗಿ ಘೋಷಿಸುವ ನಿಟ್ಟಿನಲ್ಲಿಯೂ ಪ್ರಯತ್ನಿಸಲಾಗುತ್ತಿದೆ. ವಿಷನ್ ದಾವಣಗೆರೆ ತಂಡ ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಡ್ಯ ಸೇರಿದಂತೆ ವಿವಿಧೆಡೆ ನಡೆದ ತಂತ್ರಜ್ಞಾನ ಶೃಂಗಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಕೆಡಿಇಎಂ ಹಾಗೂ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ದಾವಣಗೆರೆಯಲ್ಲಿ ಹೂಡಿಕೆ ಅವಕಾಶಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.ಪ್ರೊ. ಎಸ್.ಬಸವರಾಜಪ್ಪ, ವಿ.ಎಸ್.ಸಚಿನ್, ಸತೀಶ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ವಿಷನ್ ತಂಡದ ವೀರೇಶ ಪಟೇಲ್, ಪ್ರಶಾಂತ ಇತರರು ಇದ್ದರು. ಕೆಡಿಇಎಂ, ಯುಬಿಡಿಟಿ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನವೋದ್ಯಮ ತಂಡಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
- - -(ಬಾಕ್ಸ್)
* ವಿಮಾನ ನಿಲ್ದಾಣಕ್ಕೆ ಪ್ರಯತ್ನ: ಡಾ.ಪ್ರಭಾರಸ್ತೆ, ರೈಲು ಸಂಪರ್ಕದ ದೃಷ್ಟಿಯಿಂದ ದಾವಣಗೆರೆ ಅನುಕೂಲಕರ ಸ್ಥಳದಲ್ಲಿದ್ದು, ಶಿವಮೊಗ್ಗ-ಹುಬ್ಬಳ್ಳಿ ವಿಮಾನ ನಿಲ್ದಾಣಗಳು ಸುಮಾರು ಒಂದೂವರೆ ಗಂಟೆ ಪ್ರಯಾಣದ ಅಂತರದಲ್ಲಿವೆ. ಆದರೂ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾದರೆ ಕೈಗಾರಿಕಾ ಹೂಡಿಕೆ ಮತ್ತು ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಇಲ್ಲಿಗೆ ವಿಮಾನ ನಿಲ್ದಾಣ ಮಂಜೂರು ಮಾಡಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮನವಿ ಮಾಡುತ್ತಿದ್ದೇನೆ. ಈ ಬಗ್ಗೆ ಮತ್ತೊಮ್ಮೆ ಕೇಂದ್ರ ನಾಗರೀಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ.
ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.- - -
-19ಕೆಡಿವಿಜಿ4: ದಾವಣಗೆರೆಯಲ್ಲಿ ಸೋಮವಾರ ನವೋದ್ಯಮಗಳ ಆಲೋಚನೆಗಳ ಪ್ರಸ್ತುತಿ ಕಾರ್ಯಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು.