ಸಾರಾಂಶ
ಹುಬ್ಬಳ್ಳಿ: ಸತತ ಪರಿಶ್ರಮ, ಅಧ್ಯಯನ, ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಖ್ಯಾತ ಬರಹಗಾರ, ಅಂಕಣಕಾರ ಚೇತನ್ ಭಗತ್ ಹೇಳಿದರು.
ಇಲ್ಲಿಯ ಕೆಎಲ್‌ಇ ಸೊಸೈಟಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಡಾ. ಪ್ರಭಾಕರ ಕೋರೆ ಸ್ಪೋರ್ಟ್ಸ್ ಅರೇನಾದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ''''ಪ್ಲೀಡಿಸ್ 2025'''' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವೆಲ್ಲ ಗುರಿ ಹೊಂದಬೇಕು. ಅದನ್ನು ನಾನು ಇಷ್ಟೇ ಸಮಯದಲ್ಲಿ ಸಾಧಿಸಿಯೇ ತೀರುತ್ತೇನೆ ಎನ್ನುವ ಛಲ ಬೆಳೆಸಿಕೊಳ್ಳಬೇಕು. ಸಾಧನೆ ಹಾದಿಯಲ್ಲೇ ಎಷ್ಟೇ ಕಷ್ಟ, ಅಡೆತಡೆ ಬಂದರೂ ಎದೆಗುಂದದೇ ಮುನ್ನುಗ್ಗಬೇಕು ಎಂದರು.
ಜೀವನದಲ್ಲಿ ಯಶಸ್ಸಿಗೆ ಯಾವುದೇ ವ್ಯಾಖ್ಯಾನವಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ಅವರೆಲ್ಲ ತಮ್ಮ ಜೀವನದಲ್ಲಿ ಖುಷಿಯಾಗಿದ್ದಾರೆ ಅಂತಲ್ಲ. ಸಮಾಜ ನಮ್ಮ ಬಗ್ಗೆ ಏನು ಯೋಚಿಸುತ್ತದೆ ಎಂದು ಚಿಂತೆಗೆ ಬೀಳುವ ಬದಲು ಕ್ರಿಯಾತ್ಮಕವಾಗಿ, ತಮಗಿಷ್ಟವಾದ ಕೆಲಸ ಮಾಡುವ ಮೂಲಕ ಗುರಿ ಸಾಧಿಸುವುದೇ ಜೀವನದಲ್ಲಿ ನಿಜವಾದ ಯಶಸ್ಸು ಎಂದು ತಿಳಿಸಿದರು.ಅಡೆತಡೆ, ಸೋಲು, ನೋವು ಅನುಭವಿಸುವವನಿಗೆ ಮುಂದೆ ಉತ್ತಮ ದಿನಗಳು ಬಂದೇ ಬರುತ್ತವೆ. ಕ್ರಿಯೆಗೆ ಪ್ರತಿಕ್ರಿಯೆ ನಿಸರ್ಗದ ನಿಯಮ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದರೆ ಮುಂದಿನ ಜೀವನ ಸರಳವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮೊದಲೇ ಸುಖ ಅನುಭವಿಸಿ ಮುಂದೆ ದುಃಖ ಬಂದಾಗ ಪರಿತಪಿಸುವುದನ್ನು ಬಿಟ್ಟು ಕಷ್ಟಪಟ್ಟು ಓದಿದರೆ ನಿಮ್ಮ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಜೀವನದಲ್ಲಿ ಒಂದೇ ಗುರಿ ಎಂದೂ ಇಟ್ಟಕೊಳ್ಳಬಾರದು. 3-4 ಗುರಿ ಹೊಂದುವ ಮೂಲಕ ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಶ್ರಮ ನಡೆಸಬೇಕು. ಯಾವುದೇ ರೀತಿಯ ಆಕರ್ಷಣೆಗೆ ಒಳಗಾಗದೆ, ಮೊಬೈಲ್ ಗೀಳು, ಪ್ರೀತಿ-ಪ್ರೇಮ ಎನ್ನುವ ಮಾಯಾಜಾಲದಿಂದ ಹೊರಬಂದು ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.ಇದೇವೇಳೆ ವಿದ್ಯಾರ್ಥಿಗಳು ಕೇಳಿದ ತಮ್ಮ ಉತ್ತರಿಸಿದರು. ಕಾರ್ಯಕ್ರಮಕ್ಕೂ ಮೊದಲು ಬಿವಿಬಿ ಎಂಜಿನೀಯರಿಂಗ್ ಕಾಲೇಜಿನ ಮುಂದೆ ಡ್ರೋನ್ ಮೂಲಕ ''''ಪ್ಲೀಡಿಸ್ 2025'''' ಬ್ಯಾನರ್ ಮತ್ತು ಬಲೂನ್ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆಎಲ್‌ಇ ತಾಂತ್ರಿಕ ವಿವಿ ಚಾನ್ಸಲರ್ ಅಶೋಕ ಶೆಟ್ಟರ್, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತಿತರರಿದ್ದರು.