ಸರ್ಕಾರಿ ಜಾಗದಲ್ಲೇ ಮೇಕೆ ಶೆಡ್ಡು: ನೋಟಿಸ್

| Published : May 09 2025, 12:32 AM IST

ಸಾರಾಂಶ

ಹನೂರು ತಾಲೂಕು ಪ್ರಜಾಸೌಧ ನಿರ್ಮಾಣ ಮಾಡುವ ಸ್ಥಳದ ಕೂಗಳತೆ ದೂರದ ಸರ್ಕಾರಿ ಜಮೀನಿಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಿರುವುದು.

ಜಿ. ದೇವರಾಜ ನಾಯ್ದು

ಕನ್ನಡಪ್ರಭ ವಾರ್ತೆ ಹನೂರುಸರ್ಕಾರವು ಹನೂರು ತಾಲೂಕು ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿರುವ ಜಾಗದ ಪಕ್ಕದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ಮೇಕೆ ಶೆಡ್ಡು, ಮನೆ ತೆರವಿಗೆ ನೋಟಿಸ್‌ ನೀಡಿದೆ.ಹನೂರು ಪಟ್ಟಣದ ಕೊಳ್ಳೇಗಾಲ-ಹನೂರು ಮುಖ್ಯರಸ್ತೆಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಜಮೀನು ಗುರುತು ಮಾಡಿರುವ ಜಾಗದ ಸಮೀಪದಲ್ಲಿ ಬರುವ ಕೋಟ್ಯಂತರ ರುಪಾಯಿ ಬೆಲೆಬಾಳುವ ಸರ್ಕಾರಿ ಜಮೀನು ಭೂಕಬಳಿಸಿ ಮಂಗಲ ಗ್ರಾಮದ ವಿಶ್ವೇಶ್ವರ ಪ್ರಸಾದ್ ಹನೂರು ಹೋಬಳಿಯ ಹುಲ್ಲೇಪುರ ಸರ್ವೆ ನಂಬರ್ 355/1ಎ 5.50 ಎಕರೆ 356/ಎ ರಲ್ಲಿ 5.94 ಎಕರೆ 356/ಸಿ ರಲ್ಲಿ 2.58 ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಮೇಕೆ ಸಾಗಾಣಿಕೆ ಶೆಡ್, ಅಕ್ರಮ ಮನೆ ನಿರ್ಮಾಣ ಮಾಡಿಕೊಂಡು ಸರ್ಕಾರಿ ಜಮೀನನ್ನು ಭೂಕಬಳಿಕೆ ಮಾಡಲು ಹೊರಟಿರುವುದನ್ನು ಪ್ರಶ್ನಿಸಿ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಾಲೂಕು ದಂಡಾಧಿಕಾರಿ ಗುರುಪ್ರಸಾದ್‌ಗೆ ಮಂಗಲ ವಿಶ್ವೇಶ್ವರ ಪ್ರಸಾದ್ ಸರ್ಕಾರಿ ಜಮೀನನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿಗೊಳಿಸಿ 15 ದಿನಗಳ ಕಾಲಾವಕಾಶ ನೀಡಿ ಆದೇಶ ನೀಡಿದ್ದಾರೆ.ಏನಿದು ಪ್ರಕರಣ:

ಪಟ್ಟಣದ ಮುಖ್ಯ ರಸ್ತೆಯಲ್ಲಿ ಬರುವ ಪ್ರಜಾಸೌಧದ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದ ಸಮೀಪದಲ್ಲಿ ಬರುವ ಕೋಟ್ಯಂತರ ರುಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಲು ಹೊರಟಿರುವ ವಿಶ್ವೇಶ್ವರ ಪ್ರಸಾದ್ ಕೂಡಲೇ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಶೆಡ್‌ಗಳನ್ನು ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ನೀಡುವಂತೆ 24.05.2023ರಂದು ಅಂದಿನ ಜಿಲ್ಲಾಧಿಕಾರಿ ಸಹ ನೋಟಿಸ್ ಜಾರಿಗೊಳಿಸಿದ್ದಾರೆ. ಇದನ್ನು ಮರೆಮಾಚಿದ ಅಧಿಕಾರಿಗಳ ವಿರುದ್ಧ ಲೋಕಯುಕ್ತ ಅಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕಟ್ಟುನಿಟ್ಟಿನ ಆದೇಶದ ಮೇರೆಗೆ ತಾಲೂಕು ದಂಡಾಧಿಕಾರಿ ಗುರುಪ್ರಸಾದ್ 4.4.2025 ರಂದು ನೋಟಿಸ್ ಜಾರಿಗೊಳಿಸಿ 15 ದಿನಗಳ ಕಾಲಾವಕಾಶ ನೀಡಿ ಅವಧಿ ಮುಗಿದರೂ ಸರ್ಕಾರಿ ಜಮೀನನ್ನು ತಾಲೂಕು ದಂಡಾಧಿಕಾರಿ ವಶಕ್ಕೆ ಪಡೆಯಲು ಕಾಲಾವಕಾಶ ನೀಡಿದ್ದಾರೆ. ತಾಲೂಕು ಮಟ್ಟದ ಛಲವಾದಿ ಮಹಾಸಭಾ ವತಿಯಿಂದ ಮಾ.12, 2025ರಂದು ಪಟ್ಟಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸರ್ಕಾರಿ ಜಮೀನನ್ನು ಕಬಳಿಸಲು ಹೊರಟಿರುವ ಬಗ್ಗೆ ಸಹ ದೂರು ಸಲ್ಲಿಸಿ ಸರ್ಕಾರಿ ಜಮೀನು ಉಳಿಸುವಂತೆ ಮನವಿ ಮಾಡಲಾಗಿತ್ತು.

ಖಾಸಗಿ ವ್ಯಕ್ತಿ ಒಬ್ಬ ಕೋಟ್ಯಂತರ ರು.ಬೆಲೆಬಾಳುವ ಸರ್ಕಾರಿ ಜಮೀನನ್ನು ಕಬಳಿಸಲು ಹೊರಟಿರುವುದನ್ನು ಜಿಲ್ಲಾಧಿಕಾರಿಗೆ ಹಲವು ವರ್ಷಗಳಿಂದ ಸಾರ್ವಜನಿಕರು ಗಮನಕ್ಕೆ ತಂದಿದ್ದರೂ ಇನ್ನೂ ಸಹ ಜಮೀನು ತೆರವುಗೊಳಿಸದೆ ಇರುವುದರಿಂದ ಲೋಕಾಯುಕ್ತ ಅಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿ ಈ ಕೂಡಲೇ ಸರ್ಕಾರಿ ಜಮೀನು ವಶಕ್ಕೆ ಪಡೆಯಲು ಕೂಡಲೇ ತಹಸೀಲ್ದಾರ್‌ಗೆ ಸೂಚನೆ ನೀಡಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.-ಬಸವರಾಜ್, ಅಧ್ಯಕ್ಷ, ಛಲವಾದಿ ಮಹಾಸಭಾ ತಾಲೂಕು ಘಟಕ ಹನೂರು