ಸಾರಾಂಶ
ರಾಹುಲ್ ದೊಡ್ಮನಿ
ಕನ್ನಡಪ್ರಭ ವಾರ್ತೆ ಚವಡಾಪುರಅಫಜಲ್ಪುರ ತಾಲೂಕು ಗೊಬ್ಬೂರ (ಬಿ) ಗ್ರಾಮದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಾವುದೇ ಹೈಟೆಕ್, ಖಾಸಗಿ ಆಸ್ಪತ್ರೆಗಗೆ ಕಮ್ಮಿ ಇಲ್ಲದಂತೆ ಸುಧಾರಣೆ ಕಂಡು ರೋಗಿಗಳ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ.
ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರ ಮಧ್ಯ ಅಬ್ಬಾ ಇದು ಸರ್ಕಾರಿ ಆಸ್ಪತ್ರೆನಾ? ಇಷ್ಟೊಂದು ಜನಸ್ನೇಹಿಯಾ? ಎಂದು ಹುಬ್ಬೇರಿಸುವಂತ ಆಸ್ಪತ್ರೆಯನ್ನು ಡಾ. ಅಪರ್ಣಾ ಭದ್ರಶೆಟ್ಟಿ ಅವರು ಪರಿವರ್ತಿಸಿದ್ದಾರೆ.ರೋಗಿಗಳ ಸೇವೆಗೆ ಸದಾ ಅರ್ಪಣೆ: ಅಫಜಲ್ಪುರ ತಾಲೂಕಿನ ಗೊಬ್ಬೂರ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರವು 8 ಆಯುಷ್ಮಾನ ಆರೋಗ್ಯ ಮಂದಿರಗಳನ್ನು ಒಳಗೊಂಡಿದ್ದು 24 ಗ್ರಾಮಗಳ 41 ಸಾವಿರಕ್ಕೂ ಹೆಚ್ಚು ಜನ ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುತ್ತಾರೆ. ಇಷ್ಟು ದೊಡ್ಡ ಜನಸಂಖ್ಯೆ ಹೊಂದಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗ್ಕಿ 2023ರ ಅಕ್ಟೋಬರ್ 14ರಂದು ಆಡಳಿತ ವೈದ್ಯಾಧಿಕಾರಿಯಾಗಿ ಸೇವೆಗೆ ಬಂದ ಡಾ. ಅಪರ್ಣಾ ಭದ್ರಶೆಟ್ಟಿ ಅವರು ತಾವು ಆಡಳಿತ ವೈದ್ಯಾಧಿಕಾರಿ ಅನ್ನೋದನ್ನು ಬದಿಗಿಟ್ಟು ಇಲ್ಲಿನ ಬಡ ಜನರ ಸೇವೆ ಸಲ್ಲಿಸಲು ಬಂದವರು ಎನ್ನುವ ಭಾವದೊಂದಿಗೆ ಕೆಲಸ ಆರಂಭಿಸುತ್ತಾರೆ. ಆರಂಭದಲ್ಲಿ ಇದ್ದ ಕೆಲವು ಅಡೆತಡೆಗಳು, ಅನೇಕ ವರ್ಷಗಳಿಂದ ಬದಲಾಗದೇ ಉಳಿದಿದ್ದ ಪದ್ದತಿಗಳಿಗೆ ತಿಲಾಂಜಲಿ ಹಾಡುವ ಮೂಲಕ ಒಂದು ಸರ್ಕಾರಿ ಆಸ್ಪತ್ರೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹೇಗೆ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬುಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಆಸ್ಪತ್ರೆಗೆ ಬರುವ ಪ್ರತಿಯೊಬ್ಬರ ರೋಗಿಗಳಿಗೂ ಗಣಕೀಕೃತ ಯುನಿಕ್ ಹೆಲ್ತ್ ಐಡಿ ರಚನೆ ಮಾಡುವ ರೋಗಿಗಳ ಆರೋಗ್ಯದ ಮೇಲೆ ವಿಶೇಷ ನೀಗಾ ಇಡುವ ವ್ಯವಸ್ಥೆ ಮಾಡಿಸಿದ್ದಾರೆ. ಗರ್ಭೀಣಿಯರು, ಬಾಣಂತಿಯರ ಮೇಲೆ ವಿಶೇಷ ನೀಗಾ ಮತ್ತು ಸ್ವಚ್ಚವಾದ ಬೆಡ್ ವ್ಯವಸ್ಥೆ, ಸುಸಜ್ಜಿತ ಚಿಕಿತ್ಸೆಯನ್ನು ಕಲ್ಪಿಸುತ್ತಿದ್ದಾರೆ.ಯಾವುದೇ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲ ಈ ಸರ್ಕಾರಿ ಆಸ್ಪತ್ರೆ: ಇಲ್ಲಿಗೆ ನಿತ್ಯ 250ಕ್ಕೂ ಹೆಚ್ಚಿನ ಹೊರ ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸರಾಸರಿ 50ಕ್ಕೂ ಹೆಚ್ಚಿನ ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತಿವೆ. ಗೊಬ್ಬೂರ(ಬಿ) ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ಇದೊಂದು ಹೈಟೇಕ್ ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತೆ ಸುಂದರವಾಗಿಸಲಾಗಿದೆ. ಆಸ್ಪತ್ರೆಯ ಮುಂಭಾಗದ ಮೈದಾನದಲ್ಲಿ ಹಚ್ಚ ಹಸಿರಿನ ಪರಿಸರ ಒಳಗಡೆ ಹೋಗುತ್ತಿದ್ದಂತೆ ಮುಖ್ಯ ಗೇಟ್ ಬಳಿ ಹೆರಿಗೆ ಕೋಣೆ, ಸಾಮಾನ್ಯ ರೋಗಿಗಳ ಕೋಣೆ, ಒಪಿಡಿ ಹೀಗೆ ಸಾಮಾನ್ಯರಿಗೂ ತಿಳಿಯುವ ಹಾಗೆ ಸೂಚನಾ ಫಲಕ ಅಳವಡಿಸಲಾಗಿದೆ.
ಒಳಾಂಗಣದ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಿಮೆಂಟ್ ಆಸನ, ಅದರ ಮಧ್ಯದಲ್ಲಿ ಚಿಮ್ಮುವ ಚಿತ್ತಾರದ ಕಾರಂಜಿ ಅಳವಡಿಸಿದ್ದು ರಾತ್ರಿ ವೇಳೆಯಲ್ಲಿ ನೋಡುಗರ ಕಣ್ಮನ ಸೇಳೆಯುತ್ತಿದೆ. ಆಸ್ಪತ್ರೆಯ ಒಳಭಾಗದಲ್ಲಿ ಹರ್ಬಲ್ ಗಾರ್ಡನ ಕೂಡ ಮಾಡಲಾಗಿದೆ. ಸ್ವಚ್ಚ ಪರಿಸರ, ಸುಸಜ್ಜಿತ ಬೆಡ್ ವ್ಯವಸ್ಥೆ, ಸಕಾಲಕ್ಕೆ ಸಿಗುವ ವೈದ್ಯಕೀಯ ಸೇವೆ ಎಲ್ಲವನ್ನು ನೋಡುವ ಜನರಿಗೆ ಇದು ನಿಜಕ್ಕೂ ಸರ್ಕಾರಿ ಆಸ್ಪತ್ರೆಯಾ? ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಸುಂದರವಾಗಿಸಲಾಗಿದೆ.ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಸದಾ ಮುಂದೆ: ರಾಷ್ಟ್ರೀಯ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಲ್ಲಿ ಶೇ.95ರಷ್ಟು ಪ್ರಗತಿ ಸಾಧಸಿದ್ದು ಡಾ. ಅಪರ್ಣಾ ಹಾಗೂ ಅವರ ಸಿಬ್ಬಂದಿಗಳ ಕಾಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಉಳಿದಂತೆ ಆನ್ಲೈನ್ ಎಂಟ್ರಿ ಪೋರ್ಟಲ್‍ಗಳಾದ ಆರ್‍ಸಿಎಚ್, ನಿಕ್ಷಯ, ಇ-ಜನ್ಮ, ಸೇವಾ ಸಿಂಧು, ಇ-ಸಂಜೀವಿನಿ, ಆನ್ಲೈನ್ ಕನ್ಸಲಟೇಷನ್, ಐಎಚ್‍ಐಪಿ, ಪಿಎಮ್‍ಎಸ್‍ಎಮ್‍ಎ, ಇ-ಪಿಎಮ್‍ಎಸ್‍ಎಮ್‍ಎ ಮುಂತಾದವುಗಳಲ್ಲಿ ಶೇ.100 ಪ್ರಗತಿ ಸಾಧಿಸಲಾಗಿದೆ.
ಸರ್ಕಾರಿ ಆಸ್ಪತ್ರೆಯಾದರೂ ಕೂಡ ಜನರಿಗೆ ನೀಡುತ್ತಿರುವ ಸೇವೆ ಮತ್ತು ಸರ್ಕಾರದ ಕಾರ್ಯಕ್ರಮಗಳ ಸಫಲತೆಯನ್ನು ಗಮನಿಸಿ ಆಸ್ಪತ್ರೆಗೆ ಐಎಎಸ್ ಅಧಿಕಾರಿ ಡಾ. ಪಂಕಜಕುಮಾರ ಪಾಂಡೆ ಭೇಟಿ ನೀಡಿ ಪರಿಶೀಲಿಸಿ ಡಾ. ಅಪರ್ಣಾ ಭದ್ರಶೆಟ್ಟಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಕೊಂಡಾಡಿದ್ದಾರೆ. ಅಲ್ಲದೆ ರಾಜ್ಯ ಕಳೆದ ವಾರವಷ್ಟೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಕೂಡ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಲ್ಲಿನ ಅಚ್ಚುಕಟ್ಟು, ಸ್ವಚ್ಚತೆ, ವೈದ್ಯರು, ಸಿಬ್ಬಂದಿಗಳ ಕೆಲಸದ ವೈಖರಿ ಕಂಡು ಶ್ಲಾಘಿಸಿದ್ದು ಇವರ ಸೇವೆಗೆ ಹಿಡಿದ ಕನ್ನಡಿಯಾಗಿದೆ.ಅಫಜಲ್ಪುರ ತಾಲೂಕಿನ ಗೊಬ್ಬೂರ(ಬಿ) ಪಿಎಚ್‍ಸಿ ಜನಸ್ನೇಹಿಯಾಗಿದ್ದು ಎಲ್ಲರಿಗೂ ಬಹಳ ಗುಣಮಟ್ಟದ ಚಿಕಿತ್ಸೆ ಸಿಗುತ್ತಿದೆ. ಅದರಲ್ಲೂ ವೈದ್ಯಾಧಿಕಾರಿಗಳಾದ ಡಾ. ಅಪರ್ಣಾ ಭದ್ರಶೆಟ್ಟಿ ಅವರ ಸೇವಾ ಮನೋಭಾವ ಶ್ಲಾಘನೀಯವಾಗಿದೆ.ಡಾ. ರವಿ ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಅಫಜಲ್ಪುರ
---ನಮಗೆ ಸರ್ಕಾರದ ಸಂಬಳ ಸಿಕ್ಕಿದೆ ಎಂದು ಸೇವಾ ಮನೋಭಾವವಿಲ್ಲದೆ ಕೆಲಸ ಮಾಡಿದರೆ ಆತ್ಮತೃಪ್ತಿ ಸಿಗುವುದಿಲ್ಲ. ನಮ್ಮನ್ನೇ ನಂಬಿ ಜನ ಬಂದಾಗ ನಾವು ಅವರಿಗೆ ಸರಿಯಾದ ಆರೋಗ್ಯ ಸೇವೆ ನೀಡಿದರೆ ಅವರು ನಮ್ಮ ಸೇವೆಯಿಂದ ಸಂತುಷ್ಟರಾಗಿ ಆರೋಗ್ಯವಂತರಾದರೆ ಅದರಿಂದ ಸಿಗುವ ಆನಂದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಇದು ದೊಡ್ಡ ಸಾಧನೆಯಲ್ಲ, ಮಾಡುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ. ಇಡೀ ನನ್ನ ಸಿಬ್ಬಂದಿ ವರ್ಗದವರು ಶ್ರಮವಹಿಸುತ್ತಿರುವುದರಿಂದ ಆಸ್ಪತ್ರೆ ಸ್ವಚ್ಚವಾಗಿದೆ, ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿದೆ.
- ಡಾ. ಅಪರ್ಣಾ ಭದ್ರಶೆಟ್ಟಿ, ವೈದ್ಯಾಧಿಕಾರಿಗಳು ಗೊಬ್ಬೂರ(ಬಿ) ಆಸ್ಪತ್ರೆ