ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಾವೆಲ್ಲ ಬಿದ್ದಾಗ ನಮ್ಮನ್ನು ಮುದ್ದಿಸುವ, ಎದ್ದಾಗ ಸಂಭ್ರಮಿಸುವ ಹಾಗೂ ನಾವು ಅತ್ತಾಗ ನಮ್ಮನ್ನು ನಗಿಸಿ ನಮ್ಮ ಜೀವನಕ್ಕೆ ಅರ್ಥ ತಂದುಕೊಡುವ ತಾಯಿಯಲ್ಲಿ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನುಡಿದರು.ಇಲ್ಲಿನ ಶಿವಬಸವ ನಗರದಲ್ಲಿನ ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗ್ರಹದಲ್ಲಿ ಜರುಗಿದ ಲಿಂಗಾಯತ ಮಹಿಳಾ ಸಮಾಜದ ವಾರ್ಷಿಕೋತ್ಸವ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಗಾನ ಸಿಂಚನ ಅರ್ಪಿಸುವ ಮನರಂಜನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇವರನ್ನು ಸಮಾಜ ಕಷ್ಟಕಾಲದಲ್ಲಿ ಮಾತ್ರ ನೆನಪಿಸಿಕೊಳ್ಳುತ್ತದೆ. ಆದರೆ, ಒಂದು ಜೀವಿಗೆ ಜೀವ ಕೊಟ್ಟು ಅದರ ಪಾಲನೆ ಪೋಷಣೆ ಮಾಡುವ ತಾಯಿಯನ್ನು ಸದಾವಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.ಮಹಿಳಾ ರತ್ನ ಪ್ರಶಸ್ತಿ ಪುರಸ್ಕೃತ ಜಾಗತಿಕ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಮಾತನಾಡಿ, ಮಹಿಳೆಯರು ಪ್ರಶಸ್ತಿಗಾಗಿ ಸೇವೆ ಮಾಡದೇ ಸಮಾಜ ಸುಧಾರಣೆಗಾಗಿ ಸೇವೆ ಮಾಡಬೇಕು. ನಮ್ಮ ಬದುಕಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ವಚನಗಳಿವೆ. ಅವುಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಅಂದಾಗ ಸಂಸಾರ ಸುಖಮಯವಾಗಿರುತ್ತದೆ ಎಂದರು.ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳಾಗಿ ಆಯ್ಕೆಗೊಂಡ ಸುನಿತಾ ಪಾಟೀಲ, ಶಾರದಾ ಪಾಟೀಲ, ವಿದ್ಯಾ ಗೌಡರ, ಶೋಭಾ ಪಾಟೀಲ ಸೇರಿದಂತೆ ಇತರರನ್ನು ಸನ್ಮಾನಿಸಿ, ಗೌರವಿಸಲಾಯಿತು. ನಂತರ ಜರುಗಿದ ಗಾನ ಸಿಂಚನ ಅರ್ಪಿಸುವ ಮನರಂಜನೆ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.ಕಾರ್ಯಕ್ರಮದಲ್ಲಿ ರತ್ನಪ್ರಭಾ ಬೆಲ್ಲದ, ಶೈಲಜಾ ಬಿಂಗೆ, ಆಶಾ ಪಾಟೀಲ ಸೇರಿದಂತೆ ಲಿಂಗಾಯತ ಮಹಿಳಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ನಯನಾ ಗಿರಿಗೌಡರ ವಚನ ಪ್ರಾರ್ಥಿಸಿ, ಸ್ವಾಗತಿಸಿದರು. ಕಾವೇರಿ ಖಿಲಾರಿ ನಿರೂಪಿಸಿದರು. ಸುಕೇಶನಿ ಪಾಟೀಲ ವಂದಿಸಿದರು.
ಸ್ತ್ರೀ ಸಮಾನತೆಗಾಗಿ ಬಸವಣ್ಣನವರು ಮನೆ ಬಿಟ್ಟಿದ್ದರಿಂದ ಇಂದು ಮಹಿಳೆಯರು ನಿರ್ಭೀತಿಯಿಂದ ಮನೆಯಿಂದ ಆಚೆ ಬಂದು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಕೊಳ್ಳಲು ಸಹಕಾರಿಯಾಗಿದೆ. ಮನೆ ಕೆಲಸ ನಿಭಾಯಿಸಿ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತುಕೊಂಡು ಕಾರ್ಯನಿರ್ವಹಿಸುವುದು ಮಹಿಳೆಯರಿಗೆ ಸವಾಲಿನ ಕೆಲಸ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಲಿಂಗಾಯತ ಮಹಿಳಾ ಸಮಾಜದ ಸಂಘಟನೆಯ ಕಾರ್ಯಕರ್ತೆಯರು ಸಮಾಜ ಜಾಗೃತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಕೊಂಡಿರುವುದು ಸಂತಸದ ಸಂಗತಿ.-ಡಾ.ಅಲ್ಲಮಪ್ರಭು ಸ್ವಾಮೀಜಿ,
ನಾಗನೂರು ರುದ್ರಾಕ್ಷಿ ಮಠ.