ದೇವರು ಒಬ್ಬನೇ, ನಾಮಗಳು ಹಲವು: ಬಸವಜಯಚಂದ್ರ ಶ್ರೀ

| Published : Mar 27 2024, 01:03 AM IST

ಸಾರಾಂಶ

ಚನ್ನಗಿರಿ ಪಟ್ಟಣದಲ್ಲಿರುವ ಹಾಲಸ್ವಾಮಿ ವಿರಕ್ತ ಮಠವು ಸಾಮರಸ್ಯದ ಮಠವಾಗಿದೆ. ಈ ಮಠದ ಹಿರಿಯ ಶ್ರೀಗಳು ಪವಿತ್ರವಾದ ರಂಜಾನ್ ತಿಂಗಳಿನಲ್ಲಿ ಉಪವಾಸ ಇರುವ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟವನ್ನು ಪ್ರತಿವರ್ಷವು ಏರ್ಪಡಿಸುತ್ತಿದ್ದರು. ಈ ಜನಸೇವೆ ಮಠದ ಉತ್ತಮ ಸೇವಾ ಕಾರ್ಯಕ್ರಗಳಲ್ಲಿ ಒಂದಾಗಿದೆ ಎಂದು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಮಹಾಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಪಟ್ಟಣದಲ್ಲಿರುವ ಹಾಲಸ್ವಾಮಿ ವಿರಕ್ತ ಮಠವು ಸಾಮರಸ್ಯದ ಮಠವಾಗಿದೆ. ಈ ಮಠದ ಹಿರಿಯ ಶ್ರೀಗಳು ಪವಿತ್ರವಾದ ರಂಜಾನ್ ತಿಂಗಳಿನಲ್ಲಿ ಉಪವಾಸ ಇರುವ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟವನ್ನು ಪ್ರತಿವರ್ಷವು ಏರ್ಪಡಿಸುತ್ತಿದ್ದರು. ಈ ಜನಸೇವೆ ಮಠದ ಉತ್ತಮ ಸೇವಾ ಕಾರ್ಯಕ್ರಗಳಲ್ಲಿ ಒಂದಾಗಿದೆ ಎಂದು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಮಹಾಸ್ವಾಮೀಜಿ ನುಡಿದರು.

ಸಂಜೆ ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಮುಸ್ಲಿಂಮರಿಗೆ ಏರ್ಪಡಿಸಿದ್ದ ಇಫ್ತಿಯಾರ್ ಕೂಟದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಠಗಳು ಕೇವಲ ಒಂದೇ ಧರ್ಮಕ್ಕೆ, ಜಾತಿಗೆ ಸೀಮಿತವಾದವುಗಳಲ್ಲ. ಚನ್ನಗಿರಿ ಪಟ್ಟಣದ ಹಾಲಸ್ವಾಮಿ ವಿರಕ್ತ ಮಠವು ಸರ್ವಧರ್ಮದವರಿಗೂ ಸಮಾನವಾಗಿ ಕಾಣುವ ಮಠವಾಗಿದೆ ಎಂದರು.

ಚನ್ನಗಿರಿ ತಾಲೂಕಿನಲ್ಲಿ ಹಿಂದೂ- ಮುಸ್ಲಿಂಮರು ಸಾಮರಸ್ಯದಿಂದ ಜೀವಿಸುತ್ತಿದ್ದಾರೆ. ನಾವು ಶ್ರಾವಣ ಮಾಸದಲ್ಲಿ ಉಪವಾಸ ಮಾಡಿದರೆ, ನೀವು ರಂಜಾನ್ ತಿಂಗಳಿನಲ್ಲಿ ಉಪವಾಸ ಮಾಡುತ್ತೀರಿ. ನಾವೆಲ್ಲ ಮಾಡುವುದು ಆ ಭಗವಂತನನ್ನು ಕಾಣುವ ಒಂದು ಮಾರ್ಗವಾಗಿದೆ. ದೇವರು ಒಬ್ಬನೇ ನಾಮಗಳು ಹಲವು ಎಂಬ ಮಾತು ಸತ್ಯವಾಗಿದೆ ಎಂದರು.

ಮುಸ್ಲಿಂ ಸಮಾಜದ ಮುಖಂಡ ಅಮಾನುಲ್ಲಾ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ತತ್ವಗಳಿಗೆ ಅನುಗುಣವಾಗಿ ಈ ಹಾಲಸ್ವಾಮಿ ವಿರಕ್ತ ಮಠವು ಸಾಗಿಬರುತ್ತಿದೆ. ಮಠದಲ್ಲಿ ಪುರಾತನ ಕಾಲದಿಂದಲೂ ರಂಜಾನ್ ತಿಂಗಳ ಪವಿತ್ರವಾದ ಉಪವಾಸದಂದು ನಮ್ಮ ಸಮುದಾಯದವರಿಗೆ ಆತ್ಮೀಯವಾಗಿ ಕರೆದು, ಭೋಜನ ಕೂಟ ಏರ್ಪಡಿಸಲಾಗುತ್ತಿದೆ. ಶ್ರೀಮಠವು ಸಾಮರಸ್ಯ ಮೆರೆಯುತ್ತಿರುವುದು ಶ್ಲಾಘನೀಯ ಎಂದ ಅವರು, ಮಠದಲ್ಲಿ ಜಾತಿ, ಧರ್ಮ, ಲಿಂಗಭೇದಗಳನ್ನು ಮಾಡದೇ, ಎಲ್ಲರಿಗೂ ಸಮಾನ ಅವಕಾಶಗಳ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ವೀರಶೈವ ಸಮಾಜದ ಗೌರವ ಅಧ್ಯಕ್ಷ ರಾಜಶೇಖರಯ್ಯ ಮಾತನಾಡಿ, ಶ್ರೀ ಮಠವು ಎಲ್ಲ ಜಾತಿ-ಧರ್ಮದವರನ್ನು ಸಮಾನವಾಗಿ ಕಾಣುವ ಮಠವಾಗಿದೆ. ಯಾವುದೇ ಭಿನ್ನತೆಗಳಿಲ್ಲದೇ ಸರ್ವಜನರೂ ಮಠಕ್ಕೆ ಬಂದು ಹೋಗುತ್ತಿರುವುದು ಮಠದ ಹಿರಿಮೆಯಾಗಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ, ಮುಸ್ಲಿಂ ಮುಖಂಡರಾದ ಅಮೀರ್ ಅಹಮದ್, ಸೈಯ್ಯದ್ ಗೌಸ್ ಪೀರ್, ಸರ್ದಾರ್, ಫಾಜೀಲ್. ಖುದ್ದೂಸ್, ರಹಮತ್ ಉಲ್ಲಾ, ಶಬ್ಬೀರ್, ಸೈಯ್ಯದ್ ಇಮ್ರಾನ್, ತನ್ವೀರ್, ಸೈಯ್ಯದ್ ಇಲ್ಯಾಸ್ ಅಹ್ಮದ್, ಸಾಗರದ ಶಿವಲಿಂಗಪ್ಪ, ಜ್ಯೋತಿ ಕೊಟ್ರೇಶ್ ಕೋರಿ, ಕಮಲಾ ಹರೀಶ್, ಚಂದ್ರಯ್ಯ, ಎಚ್.ಬಿ. ರುದ್ರಯ್ಯ ಮೊದಲಾದವರು ಹಾಜರಿದ್ದರು.

- - -

-26ಕೆಸಿಎನ್‌ಜಿ2: ಚನ್ನಗಿರಿಯಲ್ಲಿ ರಂಜಾನ್‌ ಇಫ್ತಾರ್ ಕೂಟಕ್ಕೂ ಮುನ್ನ ನಡೆದ ಸಭೆಯಲ್ಲಿ ಬಸವಜಯಚಂದ್ರ ಸ್ವಾಮೀಜಿ ಮಾತನಾಡಿದರು.

-26ಕೆಸಿಎನ್‌ಜಿ3: ಇಫ್ತಿಯಾರ್ ಕೂಟದಲ್ಲಿ ಮುಸ್ಲಿಮರು ಪಾಲ್ಗೊಂಡು ಸಾಮರಸ್ಯ ಮೆರೆದರು.