ದೇವರೇ, ಈ ಸಾವು ನ್ಯಾಯವೇ?

| Published : May 20 2024, 01:37 AM IST

ಸಾರಾಂಶ

ದೇವರ ಸೇವೆ ಮಾಡಲು ಹೋಗುತ್ತೇನೆ ಎಂದು ಹೇಳಿ ಹೋದವರು ಮನೆಗೆ ಶವವಾಗಿ ಬಂದಿದ್ದಾರೆ

ಪಿ.ಎಸ್‌.ಪಾಟೀಲ ರೋಣ

ನಿಮ್ಮ ಸೇವೆ ಮಾಡಲು ಬಂದವರನ್ನು ಇಹಲೋಕ ತೊರೆಯುವಂತೆ ಮಾಡಿದ ನಿನಗೆ ಈ ಸಾವು ನ್ಯಾಯವೆ? ನೀನು ಇಷ್ಟೊಂದು ನಿಕೃಷ್ಟನಾ? ಯಾಕೆ ಹೀಗೆ ಮಾಡಿದೆ ದೇವರೇ!

ಶನಿವಾರ ಸಂಜೆ ಪಟ್ಟಣದ ವೀರಭದ್ರೇಶ್ವರ ಜಾತ್ರಾಮಹೋತ್ಸವದಲ್ಲಿ ರಥದ ಗಾಲಿಗೆ ಸಿಲುಕಿ ಮೃತರಾದವರನ್ನು ನೆನೆದು ಕಣ್ಣೀರು ಹಾಕುತ್ತಿರುವ ರೋಣ ಮತ್ತು ಬಾಸಲಾಪುರ ಗ್ರಾಮದ ಜನರ ನೋವಿನ ಮಾತುಗಳಿವು.

ದೇವರ ಸೇವೆ ಮಾಡಲು ಹೋಗುತ್ತೇನೆ ಎಂದು ಹೇಳಿ ಹೋದವರು ಮನೆಗೆ ಶವವಾಗಿ ಬಂದಿದ್ದಾರೆ. ರಥ ಎಳೆಯುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಓರ್ವ ಗಾಯಗೊಂಡಿದ್ದಾನೆ. ಮೃತರಲ್ಲಿ ರೋಣ ಪಟ್ಟಣದ ಶಿವಪೇಟೆ 10ನೇ ಕ್ರಾಸ್ ನಿವಾಸಿ ಮಲ್ಲಪ್ಪ ಲಿಂಗನಗೌಡ್ರ (55), ಇನ್ನೊಬ್ಬ ತಾಲೂಕಿನ ಬಾಸಲಾಪುರ ಗ್ರಾಮದ ಯುವಕ ಗೊಡಚಪ್ಪ ರಾಮಣ್ಣ ಬಾರಕೇರ ( 32) ಸಾವಿಗೆ ಯಾರು ಕಾರಣ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಸಾವಿಗೆ ವಿಧಿಯಾಟವೇ? ದೇವರಾ? ಅತಿಯಾದ ಜನಸಾಗರವಾ? ಭಕ್ತಿಯ ಪರಾಕಾಷ್ಠೆಯೇ? ಪೊಲೀಸರ ಸೂಕ್ತ ಬಂದೋಬಸ್ತ್‌ ಇಲ್ಲದಿರುವುದೇ? ಅಪಾಯದ ಅರಿವಿಲ್ಲದೇ ಜನ ರಥದತ್ತ ಬಾಳೆಹಣ್ಣು, ಉತ್ತತ್ತಿ ಹಾರಿಸಲೆಂದು ನುಗ್ಗಿದರಾ? ಹೀಗೆ ನಾನಾ ಪ್ರಶ್ನೆಗಳು ಜನರನ್ನು ಕಾಡುತ್ತಿವೆ.

ಗೊಡಚಪ್ಪ ಮದುವೆಗೆ ಸಿದ್ಧತೆ: ತಾಲೂಕಿನ ಬಾಸಲಾಪುರ ಗ್ರಾಮದ ಮೃತ ಯುವಕ ಗೊಡಚಪ್ಪ ಬಾರಕೇರ ಇನ್ನೂ ಬದುಕಿ ಬಾಳಬೇಕಿದ್ದವ. ವಿಧಿಯಾಟಕ್ಕೆ ಬಲಿಯಾಗಿದ್ದು ದುರಂತ. ಒಬ್ಬ ತಮ್ಮ, ಅಕ್ಕ, ತಂದೆ, ತಾಯಿಯಿದ್ದು, ಅಕ್ಕನ ಮದುವೆಯಾಗಿದೆ. ಅಣ್ಣ, ತಮ್ಮ ಮದುವೆಗೆ ಸಿದ್ಧತೆ ನಡೆಸಿದ್ದರು. ತಮ್ಮ ಪರಮೇಶ, ಅಣ್ಣ ಗೊಡಚಪ್ಪ ಇಬ್ಬರಿಗೂ ಕನ್ಯೆ ನಿಶ್ಚಯವಾಗಿತ್ತು. ತಂದೆ ರಾಮಣ್ಣ ಕೂಲಿ ಕೆಲಸಕ್ಕೆ ಹೋಗುತ್ತಾರೆ. ತಾಯಿ ಕಾಳವ್ವ ನಿತ್ಯ ಬೆಳಗ್ಗೆ ರೋಣ ಪಟ್ಟಣಕ್ಕೆ ಹೋಗಿ ಮೊಸರು ಮಾರಿಕೊಂಡು ಬರುತ್ತಿದ್ದರು.

ಗೊಡಚಪ್ಪ ಬೆಂಗಳೂರಲ್ಲಿನ ಕಂಪನಿವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಏ. 22, 2024ಕ್ಕೆ ಮದುವೆ ಮಾಡಿದರಾಯಿತು ಎಂದುಕೊಂಡಿದ್ದರು. ಹೀಗಾಗಿ 2 ತಿಂಗಳ ಹಿಂದೆಯೇ ಗ್ರಾಮಕ್ಕೆ ಬಂದಿದ್ದರು. ಆದರೆ ಗೊಡಚಪ್ಪ ಅವರು ಸಂಬಂಧಿಕರು ಇಷ್ಟು ಬೇಗ ಬೇಡ, ಡಿಸೆಂಬರದ ಹೊಸ್ತಿಲ ಹುಣ್ಣಿಮೆ ವೇಳೆ ಬಾಸಲಾಪುರದಲ್ಲಿ ಜರುಗುವ ವೀರಭದ್ರೇಶ್ವರ ಜಾತ್ರಾಮಹೋತ್ಸವದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಅದರಂತೆ ರೋಣ ವೀರಭದ್ರೇಶ್ವರ ಜಾತ್ರೆ ಮುಗಿಸಿ ಬೆಂಗಳೂರಿಗೆ ಹೋದರಾಯಿತೆಂದು ನಿನ್ನೆ ಜಾತ್ರೆಯಲ್ಲಿ ರಥದ ಗಾಲಿಗೆ ಸಿಲುಕಿ ಅಸುನೀಗಿದ್ದಾನೆ.

ಮೃತನ ಕುಟುಂಬ ಬೀದಿಗೆ: ರಥದ ಗಾಲಿಗೆ ಸಿಲುಕಿ ಮೃತನಾದ ಮಲ್ಲಪ್ಪ ಲಿಂಗನಗೌಡ್ರ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ಪತ್ನಿ ಸುಮಂಗಲಾ,‌ 16 ವರ್ಷದ ಪುತ್ರ ಮನೋಜ, 13 ವರ್ಷದ ಪುತ್ರಿ ಶ್ರೀದೇವಿ ಅಗಲಿದ ಮಲ್ಲಪ್ಪ ಲಿಂಗನಗೌಡ್ರ ಕುಟುಂಬದ ನಿರ್ವಹಣೆಗಾಗಿ ದಿನವಿಡಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿ, ಸಂಜೆ ಪಿಗ್ಮಿ ಸಂಗ್ರಹ ಮಾಡುತ್ತಾ ಬದುಕಿನ ಬಂಡಿ ಎಳೆಯುತ್ತಿದ್ದರು. ಶನಿವಾರ ಬೆಳಗ್ಗೆಯೇ ಮನೆಯಿಂದ ವೀರಭದ್ರೇಶ್ವರ ದೇಗುಲಕ್ಕೆ ಹೋಗಿದ್ದ ಮಲ್ಲಪ್ಪ ಸಂಜೆ ವರೆಗೆ ಅಲ್ಲಿನ ಗುಗ್ಗಳ ಹಾಗೂ ವಿವಿಧ ಪೂಜಾ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಮಗಳಿಗೆ ಪೋನ್ ಮಾಡಿ ಅಣ್ಣಾ, ಅವ್ವನ ಕರಕೊಂಡು ಜಾತ್ರೆಗೆ ಬರ್ರಿ, ನಾ ಇಲ್ಲೆ ಇರುತ್ತೇನೆ ಎಂದು ಹೇಳಿದ ಮಲ್ಲಪ್ಪ ಮರಳಿ ಮನೆಗೆ ಶವವಾಗಿ ಹೋಗಿದ್ದಾರೆ.

ಬೆಳಗ್ಗೆ ಜಾತ್ರೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವರು, ಮತ್ತೆ ಮನೆಗೆ ಬರಲಿಲ್ಲ. ಅಪ್ಪನಿಗೆ ಏನಾಗಿದೆ? ಅಪ್ಪ ಯಾವಾಗ ಬರತಾನ ಅಂತ ಮಕ್ಕಳು ಕೇಳಾಕತ್ತಾರ್ರಿ, ಏನ್ ಹೇಳಲಿ? ನನ್ನ ತಾಳಿ ಭಾಗ್ಯ ಕಿತ್ತಿಕೊಳ್ಳುವಷ್ಟು ಕ್ರೂರಿಯಾದನೇ ದೇವರು? ಮಕ್ಕಳು, ಮರಿ ಕಟ್ಟಿಕೊಂಡು ನಾ ಹೆಂಗ್ ಜೀವನ ಮಾಡಬೇಕು? ಸುಮಂಗಲಾ ಲಿಂಗನಗೌಡ್ರ ಮೃತ ಮಲ್ಲಪ್ಪನ ಪತ್ನಿ

ಗೊಡಚಪ್ಪ ಬಾರಕೇರ ಬಾಳ್ ಬೆಸ್ಟ್ ಹುಡುಗರಿ. ಬಾಳಾ ಬೇಕಾಗಿದ್ದ. ಯಾರ ಏನ್ ಕೆಲಸ ಹೇಳಿದರೂ ಪಟಾಪಟ್ ಅಂತ ಮಾಡ್ತಿದ್ದ. ದೊಡ್ಡವರಿಗೆ ಗೌರವ ಕೊಡೊದು, ಸಣ್ಣವರನ್ನು ಪ್ರೀತಿಯಿಂದ ಕಾಣ್ತಿದ್ದ. ಇಂತಹ ವ್ಯಕ್ತಿಗೆ ದೇವರು ಈ ರೀತಿ ಮಾಡಬಾರದಿತ್ತು ಎಂದು ಬಾಸಲಾಪುರ ಗ್ರಾಮಸ್ಥ ರುದ್ರೇಶ ಹೇಳಿದರು.