ಸಜ್ಜನರ ಕಾರ್ಯಗಳಿಗೆ ದೇವರ ಅನುಗ್ರಹ ನಿರಂತರ: ಪೇಜಾವರ ಶ್ರೀ

| Published : Apr 27 2025, 01:52 AM IST

ಸಜ್ಜನರ ಕಾರ್ಯಗಳಿಗೆ ದೇವರ ಅನುಗ್ರಹ ನಿರಂತರ: ಪೇಜಾವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕಾಟಿಪಳ್ಳದ ಗಣೇಶಪುರ ಶ್ರೀ ಕ್ಷೇತ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶ, ರಥ ಸಮರ್ಪಣೆ, ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಧಾರ್ಮಿಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ದೇಶಕ್ಕೆ ಬಂದಿರುವ ವಿಘ್ನಗಳನ್ನು ನಿವಾರಿಸಿ ಸಜ್ಜನರಿಗೆ ಅಭಯವನ್ನು ನೀಡಲಿ. ರಾವಣ ಪರಾಕ್ರಮಿಯಾದರೂ ದುಷ್ಟ ಮನಸ್ಸಿನವನಾಗಿದ್ದರಿಂದ ಆತ್ಮಲಿಂಗ ಕೊಂಡೊಯ್ಯಲು ಬಿಡದೆ ಭೂಮಿಯಲ್ಲಿ ಪ್ರತಿಷ್ಠಾಪಿಸಿದ ಗಣಪತಿಯು ದುಷ್ಟರಿಗೆ ವಿಘ್ನ ತಂದೊಡ್ಡಿದರೆ, ಸಜ್ಜನರಿಗೆ ಸದಾ ವಿಘ್ನ ನಿವಾರಿಸಿ ಆಶೀರ್ವದಿಸುತ್ತಾನೆಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಕಾಟಿಪಳ್ಳದ ಗಣೇಶಪುರ ಶ್ರೀ ಕ್ಷೇತ್ರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶ, ರಥ ಸಮರ್ಪಣೆ, ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಜರುಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ನಮ್ಮ ಸಮಾಜಕ್ಕೆ ಸಂಪ್ರದಾಯ, ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಹೋಗುವಂತಾಗಲು ಜ್ಞಾನಿಗಳ ಉಪದೇಶ, ಕಿವಿಮಾತು ಅಗತ್ಯವಿದೆ. ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಬದುಕೂ ಅವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಶುಭ ಹಾರೈಸಿದರು. ಉಡುಪಿ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯರು ಶುಭಾಶಂಸನೆಗೈದರು.ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ ಮಾತನಾಡಿ, 2020ರಲ್ಲಿ ಕ್ಷೇತ್ರವನ್ನು ೩.೫೦ ಕೋಟಿ ರು. ವೆಚ್ಚದಲ್ಲಿ ಸಮಗ್ರ ನವೀಕರಣ ಮಾಡಿದ್ದು, ೧ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಥವನ್ನು ಈ ಬಾರಿ ಸಮರ್ಪಿಸಲಾಗಿದೆ. ಕೆಲವೊಂದು ವಿಘ್ನಗಳು ಬಂದ ಕಾರಣ ಪ್ರಾರ್ಥಿಸಿದಂತೆ ನಾಗಮಂಡಲ ಸೇವೆಯನ್ನು ನೀಡಲಾಗಿದೆ. ಕಳೆದ ಒಂದು ವಾರದಿಂದ ನಡೆದ ಎಲ್ಲ ಧಾರ್ಮಿಕ, ಸಾಂಸ್ಕೃತಿಕ, ಅನ್ನಸಂತರ್ಪಣೆ ಸಹಿತ ಕ್ಷೇತ್ರದಲ್ಲಿ ವಿವಿಧ ಸಮಿತಿಯ ಸದಸ್ಯರು, ಕರಸೇವಕರು, ಕಾರ್ಯಕರ್ತರು ಶ್ರಮಿಸಿ ಅಭೂತಪೂರ್ವವವಾಗಿ ಯಶಸ್ವಿಗೊಳಿಸಿದ್ದಾರೆ ಎಂದರು.

ಈ ಸಂದರ್ಭ ಸೂರಿಂಜೆ, ಪೊನ್ನಗಿರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶೋಕ್ ಪೈವ ಹೆಗ್ಡೆ ಹಾಗೂ ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಂಆರ್‌ಪಿಎಲ್ ಒಎನ್‌ಜಿಸಿಯ ಲಾಜಿಸ್ಟಿಕ್ ವಿಭಾಗದ ಮಹಾಪ್ರಬಂಧಕ ರಾಮಸುಬ್ರಹ್ಮಣ್ಯ, ಕೃಷ್ಣಾಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಓಂಪ್ರಕಾಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯಾದವ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಅಶೋಕ್ ಕೃಷ್ಣಾಪುರ ಸನ್ಮಾನ ಪತ್ರ ವಾಚಿಸಿದರು. ದಯಾನಂದ ಕತ್ತಲ್‌ಸಾರ್ ನಿರೂಪಿಸಿದರು. ಶ್ರೀಧರ್ ಹೊಳ್ಳ ವಂದಿಸಿದರು.