ಪರರ ಸೇವೆಯಲ್ಲಿ ದೇವರನ್ನು ಕಾಣುವುದು ಆದ್ಯತೆಯಾಗಬೇಕು. ಸಂಘಟನೆಗಳು ಸಮಾಜದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾರ್ಯಗತಗೊಳಿಸುವ ಹೆಜ್ಜೆಯನ್ನಿಡಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.

ಕಾಪು: ಪರರ ಸೇವೆಯಲ್ಲಿ ದೇವರನ್ನು ಕಾಣುವುದು ಆದ್ಯತೆಯಾಗಬೇಕು. ಸಂಘಟನೆಗಳು ಸಮಾಜದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾರ್ಯಗತಗೊಳಿಸುವ ಹೆಜ್ಜೆಯನ್ನಿಡಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.ಭಾನುವಾರ ಇಲ್ಲಿನ ಶಿರ್ವ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ದಿ|ಫ್ರಾನ್ಸಿಸ್ ದಾಂತಿ ಪುಸ್ತಕ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿನಿತ್ಯ ಹೊಸ ಆವಿಷ್ಕಾರಗಳಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳು ಹೊಸ ಆವಿಷ್ಕಾರಗಳಿಗೆ ಹೊಂದಿಕೊಂಡು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾಗಿದೆ. ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿದ್ದು, ಧರ್ಮಪ್ರಾಂತ್ಯಕ್ಕೆ ಒಂದು ಉತ್ತಮ ಹಾಗೂ ಸುಸಜ್ಜಿತ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ಅಗತ್ಯತೆ ಎದ್ದು ಕಾಣುತ್ತಿದೆ. ಇದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆ ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು, ಸಮುದಾಯದ ಸಹಕಾರ ಅಗತ್ಯವಾಗಿದೆ. ಉತ್ತಮ ಶಾಲೆ ಮತ್ತು ಆಸ್ಪತ್ರೆ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ ‘ಸಖಿ ಸೂಚಿಸಿದ ಸೌಗಂಧ’ ಕವನ ಸಂಕಲನಕ್ಕೆ 2025ನೇ ಸಾಲಿನ ದಿ|ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೊನ್ಸನ್ ಡಿಆಲ್ಮೇಡಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಗಮಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಮೆಲ್ವಿನ್ ಆರಾನ್ಹ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಆಲ್ಫೋನ್ಸ್ ಡಿಸೋಜ ಅವರ ‘ಘಡಿತಾಚೆ ಬುಳ್ಬುಳೆ’ ಸಣ್ಣ ಕಥೆಗಳ ಸಂಗ್ರಹವನ್ನು ಬಿಡುಗಡೆ ಮಾಡಲಾಯಿತು. ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಚರ್ಚಿನ ಧರ್ಮಗುರು ವಂ|ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷ ಜುಲಿಯಾನ್ ರೊಡ್ರಿಗಸ್, ಘಟಕಾಧ್ಯಕ್ಷೆ ಆಗ್ನೆಸ್ ಬಾರ್ಬೋಜಾ, ಶಾಲೆಯ ಪ್ರಾಂಶುಪಾಲ ವಂ|ರೊಲ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಕೋಶಾಧಿಕಾರಿ ಗ್ಯಾರಿಫೀಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂವಿಸ್ ಡಿಸೋಜಾ, ಸಹ ಕಾರ್ಯದರ್ಶಿ ಸೋನು ಸಿಕ್ವೇರಾ, ಸಹ ಕೋಶಾಧಿಕಾರಿ ಪ್ರತಿಮಾ ಡಿಸೋಜಾ, ದಾಂತಿ ಸ್ಮಾರಕ ಟ್ರಸ್ಟಿನ ಸಂಚಾಲಕ ಆಲ್ಫೋನ್ಸ್ ಡಿಕೋಸ್ತಾ, ಕುಟುಂಬ ಸದಸ್ಯ ಚಾರ್ಲ್ಸ್ ದಾಂತಿ, ಮಾನಸ ಸಂಸ್ಥೆಯ ಅಧ್ಯಕ್ಷ ಜೋನ್ ಮಾರ್ಟಿಸ್, ವಲಯಾಧ್ಯಕ್ಷ ಜೊಯೇಲ್ ಆಲ್ಮೇಡಾ ಮತ್ತಿತರರು ಉಪಸ್ಥಿತರಿದ್ದರು.