ವ್ಯಕ್ತಿಯ ನಡತೆ ಸಮಾಜಕ್ಕೆ ಮಾದರಿಯಾಬೇಕು. ಬೇರೆಯವರಿಗೆ ಕಣ್ಣೀರು ಬರಸದೇ ಕಣ್ಣೀರು ಒರೆಸುವ ಕಾರ್ಯ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ವ್ಯಕ್ತಿಯ ನಡತೆ ಸಮಾಜಕ್ಕೆ ಮಾದರಿಯಾಬೇಕು. ಬೇರೆಯವರಿಗೆ ಕಣ್ಣೀರು ಬರಸದೇ ಕಣ್ಣೀರು ಒರೆಸುವ ಕಾರ್ಯ ಮಾಡಿದರೆ ದೇವರು ಮೆಚ್ಚುತ್ತಾನೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.ಅವರು ತಾಲೂಕಿನ ಏಣಕೂರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ವಿಚಾರದಲ್ಲಿ ಅಂತರಂಗ ಮತ್ತು ಬಹಿರಂಗ ಎರಡೂ ಒಂದೇ ಆಗಿದೆ ಹೀಗಾಗಿ ಮನುಷ್ಯನಿಗೆ ಶುದ್ಧವಾದ ಮನಸ್ಸು ಮತ್ತು ಸಮಾಜದಲ್ಲಿನ ಪ್ರಾಮಾಣಿಕ ನಡತೆ ಅತ್ಯಗತ್ಯ ಎಂದರು.
ಕೇವಲ ಹೊರಗಿನ ಆಡಂಬರ ಮುಖ್ಯವಲ್ಲ. ಒಳಗಿನ ಶುದ್ಧತೆಯೇ ನಿಜವಾದ ಭಕ್ತಿ. ಮನಸ್ಸಿನಲ್ಲಿ ದುರಾಸೆ, ಕೋಪ, ಅಸೂಯೆ ಮುಂತಾದ ಕೆಟ್ಟ ಗುಣಗಳನ್ನು ಬಿಟ್ಟು ದಯೆ, ಕರುಣೆ, ಪ್ರೀತಿಯನ್ನು ಬೆಳೆಸಿಕೊಳ್ಳುವುದೇ ಅಂತರಂಗ ಶುದ್ಧಿ, ಕಾಯಕದಲ್ಲಿ ಪ್ರಮಾಣಿಕತೆ ಸತ್ಯಶುದ್ಧ ಕಾಯಕ ಮತ್ತು ಇತರರಿಗೆ ಮೋಸ ಮಾಡದಿರುವುದೇ ಬಹಿರಂಗ ಶುದ್ಧಿಯಾಗಿದೆ ಎಂದರು.ದೇವರು ಸೃಷ್ಟಿಸಿದ ಈ ಪ್ರಕೃತಿಯನ್ನು ಹಾಳು ಮಾಡಬಾರದು. ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಶರೀರ ಆರೋಗ್ಯವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮದ ಮಕ್ಕಳು ಬಸವ ಗುರುವಿನ ಪೂಜೆ ನೆರವೇರಿಸಿದರು. ಗ್ರಾಮದ ಹಿರಿಯರಾದ ಬಾಬುರಾವ್ ಹಂಚೆ, ಕಾಶಪ್ಪ ಸೋನಾರ, ರಾಜಕುಮಾರ ಮಾನಕಾರ ಅವರು ಪೂಜ್ಯರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜಕುಮಾರ ಕೊನಗುತ್ತೆ, ಶಾಂತಪ್ಪ ಸಜ್ಜನಶೆಟ್ಟಿ, ಗುರುಬಸಯ್ಯ ಸ್ವಾಮಿ, ಮಲ್ಲಯ್ಯ ಸ್ವಾಮಿ, ವಿಠಲರಾವ ಚಿಟಗುಪ್ಪೆ, ಚನ್ನಬಸಪ್ಪ ಹಚ್ಚೆ, ವೈಜಪ್ಪ ರೆಡ್ಡಿ, ಅನೀಲಕುಮಾರ ಪಾಟೀಲ್, ಮೌಲಾನಾಸಾಬ್ ಮಿರಕಲ್ಲೆ, ರಾಜಕುಮಾರ ಓತಗೆ, ಸಂತೋಷ ತಳವಾಡೆ, ವೀರಭದ್ರಪ್ಪ ತೆಲಗಾಣೆ, ಸತೀಶ ತೇಲಂಗ, ಪ್ರದೀಪ ಬಿರಾದಾರ, ಉಮೇಶ ತಳವಾಡೆ, ಸತೀಶ ಸಜ್ಜನ, ಶಿವು ಓತಗೆ, ಗುರುಸಿದ್ಧಯ್ಯ ಕಿಣಗಿ, ರಮೇಶ ಪಟ್ನೆ, ಬಾಬುರಾವ್ ಮದಕಟ್ಟಿ ಸೇರಿದಂತೆ ಮತ್ತಿತರರು ಇದ್ದರು.ಸುಶೀಲಮ್ಮ ಕಗಡ, ರಾಜಕುಮಾರ ಮಾನಕಾರ, ರಾಜಕುಮಾರ ಕೊನಗುತ್ತೆ, ಪ್ರಭುರಾವ್ ತೆಲಗಾಣೆ ಅವರಿಂದ ದಾಸೋಹ ಸೇವೆ ನಡೆಯಿತು. ಗ್ರಾಮದ ಚಿಕ್ಕ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ದೀಪಕ ಠಮಕೆ ನಿರೂಪಿಸಿದರು. ಭಾಲ್ಕಿ ಶ್ರೀಮಠದ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ಬಸವ ಆಸ್ತಿ ರೂಪಕ ನೋಡುಗರ ಮನ ರಂಜಿಸಿತು.