ಕನ್ನಡಪ್ರಭ ವಾರ್ತೆ ರಾಮದುರ್ಗ ಇತಿಹಾಸ ಪ್ರತಿದ್ಧ ಶ್ರೀಕ್ಷೇತ್ರ ಗೊಡಚಿಯ ವೀರಭದ್ರೇಶ್ವರ ದೇವಸ್ಥಾನವು ಖಾಸಗಿ ಒಡೆತನದ ಟ್ರಸ್ಟ್‌ನಿಂದಾಗಿ ಜಾತ್ರೆಗೆ ಬರುವ ಯಾತ್ರಿಕರಿಗೆ ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಾಗದ್ದರಿಂದ ದೇವಸ್ಥಾನವನ್ನು ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಡಿಸಿ ಸವದತ್ತಿ ಯಲ್ಲಮ್ಮನ ಗುಡ್ಡದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ವಿಧಾನಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಇತಿಹಾಸ ಪ್ರತಿದ್ಧ ಶ್ರೀಕ್ಷೇತ್ರ ಗೊಡಚಿಯ ವೀರಭದ್ರೇಶ್ವರ ದೇವಸ್ಥಾನವು ಖಾಸಗಿ ಒಡೆತನದ ಟ್ರಸ್ಟ್‌ನಿಂದಾಗಿ ಜಾತ್ರೆಗೆ ಬರುವ ಯಾತ್ರಿಕರಿಗೆ ಸೂಕ್ತ ವ್ಯವಸ್ಥೆ ಮಾಡಲು ಸಾಧ್ಯವಾಗದ್ದರಿಂದ ದೇವಸ್ಥಾನವನ್ನು ರಾಜ್ಯ ಸರ್ಕಾರದ ಆಡಳಿತಕ್ಕೆ ಒಳಪಡಿಸಿ ಸವದತ್ತಿ ಯಲ್ಲಮ್ಮನ ಗುಡ್ಡದ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ವಿಧಾನಸಭೆಯ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಗುರುವಾರ ಆರಂಭಗೊಂಡ ಗೊಡಚಿ ವೀರಭದ್ರೇಶ್ವರ ಜಾತ್ರೆಯಲ್ಲಿ ತಾಲೂಕು ಪಂಚಾಯತಿ ಮತ್ತು ಗೊಡಚಿ ಗ್ರಾಮ ಪಂಚಾಯತಿ ಆಯೋಜಿಸಿದ್ದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನದ ದರ್ಶನ ಮತ್ತು ಜಾತ್ರೆಯ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಾರೆ. ಅವರು ಭಕ್ತಿಪೂರ್ವಕವಾಗಿ ದೇಣಿಗೆ ನೀಡುತ್ತಾರೆ. ಜಾತ್ರೆ ವೇಳೆ ನಾಟಕ, ವ್ಯಾಪಾರ ಮಳಿಗೆಗಳಿಂದಲೂ ಸಾಕಷ್ಟು ಆದಾಯ ಬರುತ್ತಿದ್ದರೂ, ದೇವಸ್ಥಾನದ ಟ್ರಸ್ಟ್‌ನವರು ಭಕ್ತರಿಗಾಗಿ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಸವದತ್ತಿಯ ಯಲ್ಲಮ್ಮಗುಡ್ಡ ಕ್ಷೇತ್ರವೂ ಮೊದಲು ಖಾಸಗಿಯವರ ಆಡಳಿತದಲ್ಲಿದ್ದದ್ದರಿಂದ ಅಭಿವೃದ್ಧಿ ಕಂಡಿರಲಿಲ್ಲ. ರಾಜ್ಯ ಸರ್ಕಾರ ತನ್ನ ಆಡಳಿತಕ್ಕೆ ಪಡೆದುಕೊಂಡು ಅಪಾರ ಪ್ರಮಾಣದ ಅನುದಾನ ಬಿಡುಗಡೆ ಮಾಡಿ ಸಾಕಷ್ಟು ಅಭಿವೃದ್ಧಿ ಮಾಡುತ್ತಿದೆ. ಅದೇ ರೀತಿ ಗೊಡಚಿ ಕ್ಷೇತ್ರವನ್ನು ಟ್ರಸ್ಟ್‌ನಿಂದ ಬೇರ್ಪಡಿಸಿ ಸೌಲಭ್ಯಗಳನ್ನು ಪೂರೈಕೆ ಮಾಡಲು ಸರ್ಕಾರಕ್ಕೆ ವಹಿಸಿಕೊಡಲಾಗುವುದು ಎಂದು ತಿಳಿಸಿದರು.ಜಾತ್ರೆಯ ಸಮಯದಲ್ಲಿ ಜಾತ್ರಾ ಕಮೀಟಿಗೆ ಭಕ್ತರ ಮೂಲಭೂತ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರದಿಂದ ₹ 5 ಲಕ್ಷ ಸಹಾಯಧನ ಬಿಡುಗಡೆ ಮಾಡಲಾಗಿತ್ತು. ಆದರೆ, ದೇವಸ್ಥಾನದ ಆಡಳಿತ ನಡೆಸುತ್ತಿರುವವರು ದೇವಸ್ಥಾನಕ್ಕೆ ಸಾಕಷ್ಟು ದೇಣಿಗೆ ಬರುತ್ತಿದೆ. ಸರ್ಕಾರದ ಅನುದಾನ ಬೇಡ ಎಂದು ಮರಳಿ ಕಳಿಸಿದ್ದಾರೆ. ಭಕ್ತರಿಗಾಗಿ ಯಾವುದೇ ಸೌಲಭ್ಯ ನೀಡಲು ನಿರ್ಲಿಪ್ತರಾಗಿರುವ ಕಮೀಟಿಯನ್ನು ರದ್ದುಗೊಳಿಸಿ ಸರ್ಕಾರಕ್ಕೆ ದೇವಸ್ಥಾನ ಹಸ್ತಾಂತರಿಸಲು ಪ್ರಯತ್ನಿಸಲಾಗುವು ಎಂದರು.ತಾಲೂಕು ಪಂಚಾಯತಿ ಇಒ ಬಸವರಾಜ ಐನಾಪೂರ ಮಾತನಾಡಿ, ಪ್ರತಿ ವರ್ಷ ಗೊಡಚಿ ಜಾತ್ರೆಯಲ್ಲಿ ತಾಲೂಕು ಆಡಳಿತ ರೈತರ ಅನುಕೂಲಕ್ಕಾಗಿ ವಸ್ತು ಪ್ರದರ್ಶನ ಹಮ್ಮಿಕೊಂಡಿರುತ್ತದೆ. ಜಾತ್ರೆಗೆ ಬರುವ ಭಕ್ತರು, ರೈತರು ವಸ್ತು ಪ್ರದರ್ಶನದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಗೊಡಚಿ ಗ್ರಾಪಂ ಅಧ್ಯಕ್ಷೆ ಲಕ್ಕವ್ವ ವಗ್ಗರ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮಹಾದೇವಿ, ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿಯ ಧರ್ಮಾಧಿಕಾರಿಗಳಾದ ಸಂಗ್ರಾಮಸಿಂಹ ಶಿಂಧೆ, ಸಂಜಯಸಿಂಹ ಶಿಂಧೆ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಕೃಷಿ ಸಹಾಯಕ ನಿರ್ದೇಶಕ ಎಸ್.ಎಫ್.ಬೆಳವಟಗಿ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಜಿ.ಬಿ.ರಂಗನಗೌಡ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜಾತ್ರೆಗೆ ಬಂದ ಭಕ್ತರು ಇದ್ದರು.