ದೇವಿಯ ಒಲುಮೆಯನ್ನು ಸಂಪಾದಿಸಬೇಕಾದರೆ ಪ್ರತಿಯೊಬ್ಬರು ದೇವಿಯನ್ನು ಭಕ್ತಿಯಿಂದ ಭಜಿಸಿದಾಗ ಮಾತ್ರ ಅದು ಸಾಧ್ಯ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ದೇವಿಯ ಒಲುಮೆಯನ್ನು ಸಂಪಾದಿಸಬೇಕಾದರೆ ಪ್ರತಿಯೊಬ್ಬರು ದೇವಿಯನ್ನು ಭಕ್ತಿಯಿಂದ ಭಜಿಸಿದಾಗ ಮಾತ್ರ ಅದು ಸಾಧ್ಯ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

ಅಬ್ಬೆತುಮಕೂರಿನ ಶ್ರೀ ವಿಶ್ವರಾಧ್ಯರ ಸಿದ್ಧ ಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 8ನೇ ದಿನದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ನವರಾತ್ರಿಯ ಈ ಪುಣ್ಯಕಾಲದಲ್ಲಿ ನವದುರ್ಗೆಯರನ್ನು ವಿಧ-ವಿಧ ಭಕ್ತಿಯಿಂದ ಭಜಿಸಬೇಕು. ಅಂದಾಗ ದೇವಿ ಭಕ್ತರ ಇಷ್ಟಾರ್ಥಗಳನ್ನು ಖಂಡಿತವಾಗಿಯೂ ನೆರವೇರಿಸುತ್ತಾಳೆ. ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನದಲ್ಲಿ ಪರಮ ಪೂಜ್ಯರ ನೇತೃತ್ವದಲ್ಲಿ ನಡೆಯುತ್ತಿರುವ ಈ ನವರಾತ್ರಿ ಉತ್ಸವದಿಂದ ಅಬ್ಬೆ ತುಮಕೂರು ಭಕ್ತಿಯ ಬೀಡಾಗಿ ಸಾಕ್ಷಾತ್ ಭೂ ಕೈಲಾಸದಂತೆ ಕಂಗೊಳಿಸುತ್ತಿದೆ. ಶ್ರೀ ಮಠದ ಒಡೆಯರು ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಭಕ್ತರನ್ನು ಉದ್ದರಿಸುತ್ತಿರುವುದು ಈ ಭುವನದ ಭಾಗ್ಯವೆಂದು ಹೇಳಿದರು.

ಕಲ್ಯಾಣ ಕರ್ನಾಟಕ ಸಾರಿಗೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಂಜುನಾಥ್ ಮಾತನಾಡಿ, ಮನುಷ್ಯ ಸಂಸಾರಿಕ ಜೀವನದಲ್ಲಿ ಅನೇಕ ಎಡರು-ತೊಡರುಗಳನ್ನು ಅನುಭವಿಸುತ್ತ ಸಂಕಷ್ಟದಲ್ಲಿ ಸಿಲುಕಿರುತ್ತಾನೆ. ಸಂಕಷ್ಟಮಯ ಜೀವನದಿಂದ ಪಾರಾಗಿ ಮುಕ್ತಿ ಹೊಂದಲು ಅಬ್ಬೆತುಮಕೂರಿನಂತಹ ಕ್ಷೇತ್ರ ದರ್ಶನ ಮಾಡುವುದರಿಂದ ಜೀವನದ ಸಂಕಷ್ಟಗಳು ದೂರವಾಗಿ ಸಂತೋಷ ಹೊಂದಲು ಸಾಧ್ಯ ಎಂದು ಹೇಳಿದರು.

ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ವಿಶ್ವರಾಧ್ಯರು ದೇವಿಯ ಆರಾಧಕರಾಗಿದ್ದರು. ಕಠಿಣ ತಪಸ್ಸು ಮಾಡಿ ಅಷ್ಟಸಿದ್ಧಿಗಳನ್ನು ಸಂಪಾದಿಸಿಕೊಂಡ ಸಿದ್ಧಿ ಪುರುಷರಾಗಿದ್ದರು. ಅವರ ತಪಶಕ್ತಿಗೆ ಒಲಿದ ದೇವಿ ಈ ಕ್ಷೇತ್ರದಲ್ಲಿ ನೆಲೆ ನಿಂತಿದ್ದಾಳೆ. ಅಂತೆಯೇ ಆ ದೇವಿಯನ್ನು ಅತ್ಯಂತ ಭಕ್ತಿ ಭಾವದಿಂದ ಆರಾಧಿಸಲು ಈ ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ನುಡಿದರು. ತನುಶುದ್ಧಿ- ಮನಶುದ್ಧಿಯಿಂದ ದೇವಿಯನ್ನು ಆರಾಧಿಸಬೇಕು. ಶ್ರದ್ಧೆ- ನಿಷ್ಠೆಗಳಿಂದ ಭಕ್ತಿಯನ್ನು ಆಚರಿಸಿದಾಗ ದೇವಿಯ ಒಲುಮೆ ಉಂಟಾಗಲು ಸಾಧ್ಯ ಎಂದು ಹೇಳಿದರು.

ಬೆಳಗ್ಗೆ ಶ್ರೀ ವಿಶ್ವರಾಧ್ಯರ ಗದ್ದುಗೆಗೆ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಪರಮ ಪೂಜ್ಯ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಶ್ರೀಮಠದ ಕಿರಿಯ ಸ್ವಾಮಿಗಳಾದ ಶ್ರೀ ಶಿವಶೇಖರ ವಿಶ್ವರಾಧ್ಯ ಸ್ವಾಮಿಗಳಿಂದ ನಡೆದ ಪಂಚ ಮಹಾಮಂಗಳಾರತಿ ನೆರೆದ ಭಕ್ತರನ್ನು ಭಕ್ತಿಯಲ್ಲಿ ಮಿಂದೆಸಿದ್ದಿತು. ನಂತರ ಅಬ್ಬೆ ತುಮಕೂರಿನ ಮತ್ತು ಸುತ್ತಮುತ್ತಲಿನ ಗ್ರಾಮದ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನವನ್ನು ರಂಜಿಸಿತು.

ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಸಿದ್ದಪ್ಪ ಹೊಟ್ಟಿ, ನಾಗರೆಡ್ಡಿ ಪಾಟೀಲ್ ಕರದಾಳ, ಮಲ್ಲನಗೌಡ ಕೌಳೂರ್ ಹಳಿಮನಿ, ಡಾ ಎಸ್. ಬಿ. ಕಾಮರೆಡ್ಡಿ, ಡಾ. ಪ್ರತಿಮಾ ಕಾಮರೆಡ್ಡಿ, ಡಾ. ಸುಭಾಷ್ಚಂದ್ರ ಕೌಲಗಿ, ಡಾ. ವೀರೇಶ್ ಜಾಕಾ, ಡಾ. ಶ್ವೇತಾ ಜಾಕಾ, ರಾಜು ಮಾಳಿಕೇರಿ ಬಾಂಬೆ ಸೇರಿದಂತೆ ಸಹಸ್ರಾರು ಭಕ್ತರು ಇದ್ದರು.