ಸಾರಾಂಶ
ನಾಗರಾಜ ಎಸ್.ಬಡದಾಳ್
ಕನ್ನಡಪ್ರಭ ವಾರ್ತೆ ದಾವಣಗೆರೆಭತ್ತ, ಮೆಕ್ಕೆಜೋಳ ಇತರೆ ಧಾನ್ಯ ಸಂಗ್ರಹಿಸಿಡುವ ಉಗ್ರಾಣವನ್ನೇ ಶಾಲೆಯಾಗಿ ಪರಿವರ್ತಿಸಿ, ಗೋದಾಮಿನ ವಿಶಾಲ ಒಳಾಂಗಣದಲ್ಲಿ ಗೋಡೆಗಳ ಕಟ್ಟಿ ವಸತಿ ಶಾಲೆ ನಡೆಸಿ ಅದೇ ಉಗ್ರಾಣದಲ್ಲಿ ಬಾಗಿಲುಗಳಿಲ್ಲದ ಶೌಚಾಲಯ, ಸ್ನಾನದ ಮನೆ ಸೌಲಭ್ಯ ನೀಡಿ ಸಮಾಜ ಕಲ್ಯಾಣ ಇಲಾಖೆಯು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಎಂಬ ಖ್ಯಾತಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ.
ಚನ್ನಗಿರಿ ತಾಲೂಕು ಕಾರಿಗನೂರು ಗ್ರಾಮದ ಬಳಿ ಉಗ್ರಾಣವೊಂದರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸ್ಥಾಪಿಸಿ ಸ್ವತಃ ಬಾಬಾ ಸಾಹೇಬರು ಬಾಲ್ಯದಲ್ಲಿ ಅನುಭವಿಸಿದ್ದ ಸಂಕಷ್ಟಗಳ ಪೈಕಿ ಕೆಲವನ್ನು ಕಾರಿಗನೂರು ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಎದುರಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಿಂದ 30-35 ನಿಮಿಷ ಪ್ರಯಾಣದ ನಂತರದ ಕಾರಿಗನೂರು ಗ್ರಾಮದ ಬಳಿಯ ವೇರ್ ಹೌಸ್‌ನಲ್ಲಿ ಶಾಲೆ ನಡೆಯುತ್ತಿದ್ದರೂ, ಅಲ್ಲಿನ ಮಕ್ಕಳ ಪರಿಸ್ಥಿತಿ ಹೇಗಿದೆ? ಸೌಲಭ್ಯ ಏನಿದೆ ಎಂದು ಗಮನಿಸುವ ಮನಸ್ಸು ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇದ್ದಂತಿಲ್ಲ. ಕಂಡರೂ ಕಾಣದಂತೆ ಸಮಾಜ ಕಲ್ಯಾಣಾಧಿಕಾರಿ, ಶಿಕ್ಷಣಾಧಿಕಾರಿಗಳು ಇದ್ದಾರೆ.ಮಕ್ಕಳಿಗಾಗಿ ಸರ್ಕಾರ ಕೋಟಿಗಟ್ಟಲೇ ಹಣ ಸುರಿಯುತ್ತಿದ್ದರೂ ಸೌಲಭ್ಯಗಳೇ ಮರೀಚಿಕೆಯಾಗಿವೆ. ಸರ್ಕಾರದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್)ದ ವ್ಯಾಪ್ತಿಗೊಳಪಡುವ ಶಾಲೆ ಇದು. 6ರಿಂದ 10ನೇ ತರಗತಿವರೆಗಿನ ಬಾಲಕ-ಬಾಲಕಿಯರು ಸೇರಿ ಸುಮಾರು 250 ಮಕ್ಕಳು ಓದುವ ಶಾಲೆಯಲ್ಲಿ ನೆಲದ ಮೇಲೆಯೇ ಕುಳಿತು ಪಾಠ ಆಲಿಸಬೇಕು. ಕೊಠಡಿಗಳ ಫ್ಯಾನ್ ಹಾಗೂ ಸೀಲಿಂಗ್ ಸ್ಥಿತಿ ನೋಡಿದರೆ ಯಾವಾಗ ಕಿತ್ತು ಮಕ್ಕಳ ಮೇಲೆ ಬೀಳುತ್ತವೋ ಎಂಬಂತಿವೆ. ಶಾಲೆಗೆ ಕೆಲಸಗಾರರಿದ್ದರೂ ಶಾಲಾ ಮಕ್ಕಳಿಂದಲೇ ಕೆಲಸ ಮಾಡಿಸುವುದು ಇಲ್ಲಿ ನಿಂತಿಲ್ಲ.
ಸರ್ಕಾರದಿಂದ ವಸತಿ ಶಾಲೆಗಾಗಿ ಲಕ್ಷಾಂತರ ರು. ಅನುದಾನ ಬರುತ್ತಿದ್ದರೂ, ಶಾಲೆಗಾಗಿ ಸದ್ಭಳಕೆಯಾಗದೇ ಗೋದಾಮಿನ ಬಾಡಿಗೆಗೆ ಕರಗುತ್ತಿರುವಂತಿದೆ. ಸೂಕ್ತ ಮತ್ತು ಎಲ್ಲಾ ಮೂಲ ಸೌಕರ್ಯವಿರುವ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲು ಪ್ರಾಚಾರ್ಯರು ಆಸಕ್ತಿ ತೋರುತ್ತಿಲ್ಲ. ನೂರಾರು ಮಕ್ಕಳ ಆರೋಗ್ಯ, ಹಿತ, ಕಾಪಾಡಬೇಕಾದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರುಸಮಾಜ ಕಲ್ಯಾಣಕ್ಕೆ ಗಮನ ಕೊಡದೇ ತಮ್ಮದೇ ನಿರ್ಲಕ್ಷ್ಯ ಮುಂದುವರಿಸಿದ್ದಾರೆಂಬ ಅಸಮಾಧಾನದ ಮಾತು ಜನರಿಂದ ಕೇಳಿ ಬರುತ್ತಿದೆ. ಸ್ಥಳಾಂತರಕ್ಕೆ ಕ್ರೈಸ್ ಪತ್ರಕ್ಕೂ ಕಿಮ್ಮತ್ತಿಲ್ಲವೇ?!ಗೋದಾಮಿನ ಮೇಲ್ಚಾವಣಿಗ ಸಿಮೆಂಟ್, ತಗಡಿನ ಶೀಟುಗಳ ಕಾವಿನ ಜೊತೆಗೆ ಅಲ್ಲಲ್ಲಿ ಬಿಟ್ಟಿರುವ ಕಿಂಡಿಯಿಂದ ಬರುವ ಬೆಳಕೇ ಇಡೀ ಶಾಲೆಗೆ ಆಸರೆಯಾಗಿದೆ. ಗಾಳಿ, ಬೆಳಕು ಇಲ್ಲದೇ, ಪಾರಿವಾಳ, ಗುಬ್ಬಿ ಸೇರಿ ಪಕ್ಷಿಗಳು ಉಗ್ರಾಣದಲ್ಲಿ ಹಾರಾಡುತ್ತಾ ತರಗತಿಗಳು, ಅಡುಗೆ ಮನೆ, ಅಲ್ಲಿ ಓದಲು ಕುಳಿತ ಮಕ್ಕಳ ಮೇಲೆ ಹಿಕ್ಕೆ ಹಾಕುತ್ತಿರುತ್ತವೆ. ಕ್ರೈಸ್‌ನಿಂದ 2022ರಲ್ಲೇ ಉಗ್ರಾಣದಲ್ಲಿರುವ ನಡೆಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯನ್ನು ಸೂಕ್ತ ಕಟ್ಟಡಕ್ಕೆ, ಮೂಲ ಸೌಕರ್ಯ ಕಡೆ ಸ್ಥಳಾಂತರಿಸ ಆದೇಶ ಬಂದಿದೆ. ಆದರೆ, ಅದ್ಯಾವುದಕ್ಕೂ ಶಾಲಾ ಮುಖ್ಯಸ್ಥರು, ಪ್ರಾಚಾರ್ಯರು, ಸಿಬ್ಬಂದಿಯಾಗಲೀ ಕಿವಿಗೊಟ್ಟಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.