ದೇಶದೆಲ್ಲೆಡೆ 1 ಕೋಟಿ ದೇವಸ್ಥಾನಗಳಿದ್ದು ಪ್ರತಿ ವರ್ಷ 3000 ದೇವಸ್ಥಾನಗಳ ಆದಾಯ ₹ 4.5 ಲಕ್ಷ ಕೋಟಿ ಇದೆ. ಮಾರುಕಟ್ಟೆ, ಕಲೆ, ಸಾಹಿತ್ಯ, ಪ್ರವಾಸೋದ್ಯಮದ ವಿಸ್ತಾರವನ್ನೂ ಹೊಂದಿವೆ. 10 ಕೋಟಿಗಿಂತಲೂ ಹೆಚ್ಚು ಜನರು ತಮ್ಮ ವೃತ್ತಿಗಳನ್ನು ದೇವಸ್ಥಾನಗಳ ಮೂಲಕ ಹೊಂದಿದ್ದಾರೆ ಎಂದು ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ ಹೇಳಿದರು.
ಹುಬ್ಬಳ್ಳಿ:
ಯಾರು ಪ್ರಾರ್ಥಿಸುತ್ತಾರೋ, ಪೂಜಿಸುತ್ತಾರೋ, ಆರಾಧಿಸುತ್ತಾರೋ ಅವರಿಗೆ ಅದೇ ರೂಪದಲ್ಲಿ ದೇವರು ದರ್ಶನಾಶೀರ್ವಾದ ಮಾಡುತ್ತಾನೆ. ಅವರವರ ಭಾವಕ್ಕೆ ತಕ್ಕಂತೆ ಶಿವನಿದ್ದಾನೆ. ಭಜಿಸಿದಂತೆ ಫಲ ಕೊಡುತ್ತಾನೆ ಎಂದು ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ ಹೇಳಿದರು.ಇಲ್ಲಿನ ಶಿರೂರ ಪಾರ್ಕ್ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಶ್ರೀಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀಅಯ್ಯಪ್ಪ ಸ್ವಾಮಿ ಪರಿವಾರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಶದೆಲ್ಲೆಡೆ 1 ಕೋಟಿ ದೇವಸ್ಥಾನಗಳಿದ್ದು ಪ್ರತಿ ವರ್ಷ 3000 ದೇವಸ್ಥಾನಗಳ ಆದಾಯ ₹ 4.5 ಲಕ್ಷ ಕೋಟಿ ಇದೆ. ಮಾರುಕಟ್ಟೆ, ಕಲೆ, ಸಾಹಿತ್ಯ, ಪ್ರವಾಸೋದ್ಯಮದ ವಿಸ್ತಾರವನ್ನೂ ಹೊಂದಿವೆ. 10 ಕೋಟಿಗಿಂತಲೂ ಹೆಚ್ಚು ಜನರು ತಮ್ಮ ವೃತ್ತಿಗಳನ್ನು ದೇವಸ್ಥಾನಗಳ ಮೂಲಕ ಹೊಂದಿದ್ದಾರೆ ಎಂದರು.ನಮ್ಮ ಮನಸ್ಸಿಗೆ ಭೌತಿಕ, ಬೌದ್ಧಿಕ ಪದಾರ್ಥ ಹಾಕಿದರೆ ತಣಿಯುವುದಿಲ್ಲ. ಆರಾಧನೆ, ಭಕ್ತಿ, ಪೂಜೆ ಹಾಕಿದರೆ ಮನಸ್ಸು ತಣಿಯುತ್ತದೆ. ಉಪನಿಷತ್‌ಗಳಲ್ಲಿ ಸಗುಣೋಪಾಸನೆ ಇದೆ. ಇದರ ಮೂಲಕ ನಮ್ಮ ಹಿರಿಯರು ಗ್ರಾಮದಲ್ಲಿ ದೇವಾಲಯ, ಮನೆಯಲ್ಲಿ ಜಗಲಿ ನಿರ್ಮಿಸಿ ಉಪಾಸನೆಗೆ ಹಚ್ಚಿದರು. ಮನಸ್ಸು ಶುದ್ಧ, ಪ್ರಸನ್ನ, ಸ್ವಚ್ಛವಾಗಿಡಲು ದೈವೀ ಉಪಾಸನೆಯತ್ತ ತೆಗೆದುಕೊಂಡು ಹೋಗುವಂತೆ ಮಾಡಿದರು. ಈ ಮೂಲಕ ನಮ್ಮನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂಬ ಸಂಕಲ್ಪ ಮಾಡಿದರು. ಆದರೆ, ಅಲ್ಪ ಬುದ್ಧಿಯವರಿಗೆ ಇವುಗಳನ್ನು ಅರ್ಥ ಮಾಡಿಕೊಳ್ಳುಲು ಸಾಧ್ಯವಿಲ್ಲ ಎಂದರು.
ಶ್ರೀಅಯ್ಯಪ್ಪ ಭಕ್ತ ವೃಂದ ಟ್ರಸ್ಟ್‌ನ ಡಾ. ವಿ.ಎಸ್.ವಿ. ಪ್ರಸಾದ, ಆನಂದ ಗುರುಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ತದ್ರೂಪ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಿಸುವ ಕನಸು ಕಂಡು ನನಸು ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿದೇಶಕ ಡಾ. ಆನಂದ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ಹೇಳಿದರು.ದೇವಸ್ಥಾನದ ಧರ್ಮಾಧಿಕಾರಿ ಆನಂದ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಲಬುರ್ಗಿಯ ಸವಿತಾನಂದ ಸ್ವಾಮೀಜಿ, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷ ಹಾಗೂ ಉದ್ಯಮಿ ಡಾ. ಆನಂದ ಸಂಕೇಶ್ವರ, ಶಬರಿಮಲೈ ಅಯ್ಯಪ್ಪ ಸೇವಾ ಸಮಾಜದ ಅಖಿಲ ಭಾರತ ಅಧ್ಯಕ್ಷ ಟಿ.ಬಿ. ಶೇಖರ, ಟ್ರಸ್ಟ್ ಕಾರ್ಯದರ್ಶಿ ಜಯರಾಮ ಶೆಟ್ಟಿ, ಕುಮಾರ ಗುರು ಸೇರಿದಂತೆ ಹಲವರಿದ್ದರು.