ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಧನವಂತನಿಗಿಂತ ಗುಣವಂತನಿಗೆ ಗೌರವ ಸಲ್ಲುತ್ತದೆ. ಧನ ಮತ್ತು ಜ್ಞಾನದ ಸದ್ವಿನಿಯೋಗ, ಸಮಾಜಕ್ಕೆ ಒಳಿತಾಗಬೇಕು ಎನ್ನುವ ಸಾಮೂಹಿಕ ಚಿಂತನೆಯಿಂದ ಎಲ್ಲರಿಗೂ, ಎಲ್ಲವೂ ಒಳಿತಾಗುತ್ತದೆ. ಶ್ರದ್ಧಾಭಕ್ತಿ ಪ್ರೀತಿಯ ಸೇವೆಯಿಂದ ದೇವರ ಅನುಗ್ರಹ ಸಾಧ್ಯ ಎಂದು ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಭಾನುವಾರ ಬೆಳಗ್ಗೆ ಮಾಘ ಶುದ್ಧ (ವಸಂತ) ಪಂಚಮಿಯ ದಿನದಂಗವಾಗಿ ಮುಂಡ್ಕೂರು ಸಚ್ಚೇರಿಪೇಟೆಯ ಜಿ.ಎಸ್.ಬಿ ಸಮಾಜ ಸೇವಾ ಸಂಘದ ವತಿಯಿಂದ ಜೀರ್ಣೋದ್ಧಾರಗೊಂಡ ಶ್ರೀ ಲಕ್ಷ್ಮೀವೆಂಕಟೇಶ ಭಜನಾ ಮಂದಿರದಲ್ಲಿ ಶ್ರೀ ಮಹಾಗಣಪತಿ ಹಾಗೂ ಶ್ರೀ ಲಕ್ಷ್ಮೀವೆಂಕಟೇಶ ದೇವರ ಪುನರ್ ಪ್ರತಿಷ್ಠೆ, ನೂತನ ಶ್ರೀ ಲಕ್ಷ್ಮೀ ವೆಂಕಟೇಶ ಕಲಾ ಮಂದಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದಾಸರ ಪದಗಳು ಮಧ್ವ ಸಿದ್ಧಾಂತವನ್ನು ಪರಿಣಾಮಕಾರಿಯಾಗಿ ಚಿತ್ರಿಸಿವೆ ಎಂದ ಶ್ರೀಗಳು, ಗುಣದಲ್ಲಿ ಬಡವರಾಗಬಾರದು. ಗುರು ಸುಧೀಂದ್ರರ ಆಶಯದಂತೆ ಮಂದಿರಗಳ ಮೂಲಕ ಸಮಾಜವನ್ನು ಸಂಸ್ಕಾರವಂತರನ್ನಾಗಿ ಸಂಘಟಿಸಿ ಸಮಾಜದ ಒಳಿತನ್ನು ಸಾಧಿಸುವ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದವರು ನುಡಿದರು.ಸಭಾ ಕಾರ್ಯಕ್ರಮದಲ್ಲಿ ಸಚ್ಚೇರಿಪೇಟೆ ಜಿ.ಎಸ್.ಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಬಿ. ಶ್ರೀಕಾಂತ್ ಕಾಮತ್, ಜೊತೆ ಕಾರ್ಯದರ್ಶಿ ವಿನೋದ್ ಶೆಣೈ ಸಹಿತ ಪದಾಧಿಕಾರಿಗಳಿಂದ ಶ್ರೀಗಳವರ ಪಾದ ಪೂಜೆ ನಡೆಯಿತು. ಕಾರ್ಯದರ್ಶಿ ಅಭಿಜತ್ ಶೆಣೈ ದಾನಿಗಳ ವಿವರ ನೀಡಿದರು.
ರಜತ ಸಿಂಹಾಸನ ಸೇವೆದಾರ ಎಂ. ಏಕನಾಥ ಪ್ರಭು, ಅಕ್ಷತಾ ಪ್ರಭು ಮಂಗಳೂರು, ಶಿಲಾ ವಸಂತ ಮಂಟಪ ಸೇವೆದಾರ ಬೋಳ ಗಣೇಶ್ ಕಾಮತ್, ಲತಾ ಕಾಮತ್, ದಾನಿಗಳಾದ ಶ್ರೀನಿವಾಸ ರಘುನಂದನ ಕಾಮತ್, ಸಿದ್ಧಾಂತ್ ರ ಘುನಂದನ್ ಕಾಮತ್, ಗಿರೀಶ್ ಪೈ, ಸಹಿತ ಸೇವಾದಾರರಿಗೆ ಶ್ರೀಗಳವರು ಗೌರವ ಪ್ರಸಾದ ನೀಡಿದರು.ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮಶತಾಬ್ಧಿ ಮಹೋತ್ಸವದ ಅಂಗವಾಗಿ ನಡೆದಿರುವ ‘ಶ್ರೀ ಸುಧೀಂದ್ರ ಫಲೋದ್ಯಾನ’ ಅಭಿಯಾನದ ಅಂಗವಾಗಿ ಮಂದಿರದ ಆವರಣದಲ್ಲಿ ನೆಟ್ಟು ಬೆಳೆಸಲು ಫಲದ ಸಸಿಗಳನ್ನು ಶ್ರೀಗಳವರು ಸಾಂಕೇತಿಕವಾಗಿ ಮಂದಿರದ ಪದಾಧಿಕಾರಿಗಳಿಗೆ ನೀಡಿದರು. ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಮುಂಡ್ಕೂರು ಜಗನ್ನಾಥ ಕಾಮತ್, ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಮುಂಡ್ಕೂರು ವಿಠೋಭಾ ಮಂದಿರದ ಎಂ. ವೆಂಕಟೇಶ ಕಾಮತ್, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸಹಿತ ಆಸುಪಾಸಿನ ಪ್ರಮುಖರು ಉಪಸ್ಥಿತರಿದ್ದರು.
ಪುನರ್ ಪ್ರತಿಷ್ಠಾ ಸಂಭ್ರಮ: ಭಾನುವಾರ ಬೆಳಗ್ಗೆ ಪ್ರಾರ್ಥನೆ, ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಪ್ರತಿಷ್ಠಾ ಕಲಶ ಪೂಜನ, ಪ್ರತಿಷ್ಠಾ ಹೋಮ ಮಹಾಪೂರ್ಣಾಹುತಿ ನಡೆಯಿತು. ಮಂಗಳೂರು ಮೊಕ್ಕಾಂನಿಂದ ಚಿತ್ತೈಸಿದ ಶ್ರೀಗಳಿಗೆ ಮಂಗಲ ವಾದ್ಯ ಘೋಷ ಸಹಿತ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ದ್ವಾರ ಪೂಜೆ, ಲಕ್ಷ್ಮೀ ಪೂಜೆ, ಗೋದಾನ, ಮುಹೂರ್ತ ನಿರೀಕ್ಷಣೆಯ ಬಳಿಕ ಸ್ವಾಮೀಜಿಯವರ ದಿವ್ಯ ಕರಕಮಲಗಳಿಂದ ಬಿಂಬಗಳ ಪುನರ್ ಪ್ರತಿಷ್ಠೆ, ಶ್ರೀ ದೇವರ ಪ್ರಸನ್ನ ಪೂಜೆ ಜರುಗಿತು.ಅಷ್ಠಮಂಗಲ ನಿರೀಕ್ಷಣ, ಶ್ರೀದೇವರಿಗೆ ಪಟ್ಟಕಾಣಿಕೆ, ಗುರುಕಾಣಿಕೆ ಸಲ್ಲಿಸಲಾಯಿತು. ಮೂಲ್ಕಿಯ ವೇದಮೂರ್ತಿ ಸುರೇಶ್ ಭಟ್ ಹಿರಿತನದಲ್ಲಿ ವೈದಿಕರ ಬಳಗದ ಧಾರ್ಮಿಕ ವಿಧಾನಗಳು ಜರುಗಿದವು.
ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಭಜನಾ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಭೂರಿ ಸಮಾರಾಧನೆ ಜರುಗಿತು. ರಾತ್ರಿ ಪೂಜೆ, ಮಂದಿರದ ಪ್ರಾಂಗಣದಲ್ಲಿ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಭೂವೈಕುಂಠ ದರ್ಶನ ವಿಶೇಷ ದೀಪಾಲಂಕಾರ ಸೇವೆ, ವಸಂತ ಪೂಜೆ, ಪ್ರಸಾದ ವಿತರಣೆ ನಡೆದು, ಬೆಂಗಳೂರು ಬಾಲಚಂದ್ರ ಪ್ರಭು ಬಳಗದವರಿಂದ ಭಜನಾಮೃತ ಕಾರ್ಯಕ್ರಮ ಜರುಗಿತು.