ಸಾರಾಂಶ
ಶಿರಗುಂಪಿ ಅಕ್ಕಪಕ್ಕದ ಬಳೂಟಗಿ ಹಾಗೂ ಮೇಗೂರು ಗ್ರಾಮಗಳ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರುಗಳು ಎರಡು ಕಿಲೋಮಿಟರ್ ಮೆರವಣಿಗೆ ಮೂಲಕ ಸಾಗಿ ಶಿರಗುಂಪಿ ಗ್ರಾಮದಲ್ಲಿ ಪರಸ್ಪರ ಭೇಟಿ ನೀಡುವ ಮೂಲಕ ಸಾರ್ವಜನಿಕರಿಗೆ ದರ್ಶನ ನೀಡಿದರು.
ಕುಷ್ಟಗಿ:
ತಾಲೂಕಿನ ಶಿರಗುಂಪಿ ಗ್ರಾಮದಲ್ಲಿ ಮೂರು ಗ್ರಾಮಗಳ ಸರ್ವಧರ್ಮಿಯರು ಮೊಹರಂ ಹಬ್ಬವನ್ನು ಭಾವೈಕ್ಯತೆ, ಸಾಮರಸ್ಯದಿಂದ ಆಚರಿಸಿದರು.ಶಿರಗುಂಪಿ ಅಕ್ಕಪಕ್ಕದ ಬಳೂಟಗಿ ಹಾಗೂ ಮೇಗೂರು ಗ್ರಾಮಗಳ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರುಗಳು ಎರಡು ಕಿಲೋಮಿಟರ್ ಮೆರವಣಿಗೆ ಮೂಲಕ ಸಾಗಿ ಶಿರಗುಂಪಿ ಗ್ರಾಮದಲ್ಲಿ ಪರಸ್ಪರ ಭೇಟಿ ನೀಡುವ ಮೂಲಕ ಸಾರ್ವಜನಿಕರಿಗೆ ದರ್ಶನ ನೀಡಿದರು. ಈ ಪದ್ಧತಿ ಹಲವು ದಶಕಗಳಿಂದ ಇಲ್ಲಿನ ಜನರು ಆಚರಿಸುತ್ತಾ ಬಂದಿದ್ದು ಹತ್ತಾರು ಗ್ರಾಮಗಳ ಸಾವಿರಾರು ಜನರು ಅಲಾಯಿ ದೇವರ ದರ್ಶನ ಪಡೆದುಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು.
ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದ ಮೇಗೂರು ಹಾಗೂ ಒಂದು ಕಿಲೋ ಮೀಟರ್ ದೂರದ ಬಳೂಟಗಿಯಿಂದ ಅಲಾಯಿ ದೇವರು ಭಾಜಾ, ಭಜಂತ್ರಿ, ಡೊಳ್ಳು, ಹೆಜ್ಜೆ ಕುಣಿತದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದವು.ಗುಂಗಾಡಿಹುಳು ಭೇಟಿ ವಿಶೇಷ:
ಅಲಾಯಿ ದೇವರು ಭೇಟಿ ಕೊಡುವ ವೇಳೆ ಎರಡು ಗುಂಗಾಡಿಯ ಹುಳುಗಳು ಬಂದು ಅಲಾಯಿ ದೇವರ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಮಾಯವಾಗುತ್ತಿದ್ದು ಮುದಗಲ್ ಕೋಟೆಯಿಂದ ಈ ಗುಂಗಾಡಿ ಹುಳುಗಳು ಬರುತ್ತವೆ ಎಂದು ಜನರಲ್ಲಿ ನಂಬಿಕೆ ಇದೆ. ಇಂದಿಗೂ ಆ ಗುಂಗಾಡಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು ಇವುಗಳನ್ನು ನೋಡಿದ ಜನರು ಸಂತಸದಿಂದ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಅಲಾಯಿ ದೇವರುಗಳು ಭೇಟಿಯ ನಂತರ ಭಕ್ತರು ಮಸೀದಿಗೆ ಭೇಟಿ ನೀಡಿ ಸಕ್ಕರೆ ನೈವೆದ್ಯ ಅರ್ಪಿಸಿದರು.ಈ ವೇಳೆ ಶಿರಗುಂಪಿ, ಮೇಗೂರು, ಬಳೂಟಗಿ, ಬನ್ನಟ್ಟಿ, ಕುಡ್ಲೂರು, ತೆಗ್ಗಿಹಾಳ, ಮಾದಾಪೂರ, ಮುದೇನೂರು, ಬಸಾಪೂರ, ಕೆ. ಬೆಂಚಮಟ್ಟಿ ಜಾಲಿಹಾಳ, ರ್‍ಯಾವಣಕಿ, ಮಾಟೂರು, ದೋಟಿಹಾಳ, ಕೇಸೂರು, ಹೆಸರೂರು, ಕಲಕೇರಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಭಾಗವಹಿಸಿದ್ದರು.