ಕನ್ನಡಪ್ರಭ ವಾರ್ತೆ ಗೋಕಾಕ ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಮಾಡುವ ಕುರಿತು ನಿರ್ಣಯ ಕೈಕೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಮಾಡುವ ಕುರಿತು ನಿರ್ಣಯ ಕೈಕೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಗೋಕಾಕ ಜಿಲ್ಲೆಯಾಗುವುದರ ಸಂಬಂಧ ಮಠಾಧೀಶರು ಮತ್ತು ಹೋರಾಟ ಸಮಿತಿಯ ಸದಸ್ಯರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಗಳ ಪುನವಿರ್ಂಗಡಣೆ ಸಂಬಂಧವಾಗಿ ಆಗಿನ ಸರ್ಕಾರಗಳು ರಚಿಸಿದ್ದ ಎಲ್ಲ ಆಯೋಗಗಳು ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲಾ ಕೇಂದ್ರವಾಗಲು ಯೋಗ್ಯ ಇವೆ. ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಜಿಲ್ಲೆಗಳು ತಲೆ ಎತ್ತಬೇಕು ಎಂಬ ವರದಿಗಳನ್ನು ಸರ್ಕಾರಗಳಿಗೆ ಶಿಫಾರಸ್ಸು ಮಾಡಿ ತಮ್ಮ ವರದಿಗಳನ್ನು ಸಲ್ಲಿಕೆ ಮಾಡಿವೆ. ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಜಿಲ್ಲೆಯ ಎಲ್ಲ 18 ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರ ಸಭೆಯನ್ನು ಕರೆದು ನಿರ್ಣಯ ಮಾಡುವುದಾಗಿ ಹೇಳಿದ್ದಾರೆ. ವಿಧಾನ ಮಂಡಲ ಅಧಿವೇಶನ ಮುಗಿಯುವದರೊಳಗಾಗಿ ಜಿಲ್ಲಾ ರಚನೆಯ ಸಂಬಂಧ ಸ್ಪಷ್ಟ ನಿರ್ಣಯವನ್ನು ತೆಗೆದುಕೊಳ್ಳಬೇಕು. ಜಿಲ್ಲಾ ರಚನೆಗಾಗಿ ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಶಾಸಕರು ಸಭೆ ಕರೆದು ಅಂತಿಮ ನಿರ್ಣಯವನ್ನು ಮಾಡುವಂತೆ ಸಭಾಧ್ಯಕ್ಷರ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.