ಯುಪಿಎಸ್‌ಸಿ ಪರೀಕ್ಷೆಯಲ್ಲಿ ಗೋಕಾಕ ಯುವಕನ ಸಾಧನೆ

| Published : Apr 25 2025, 11:52 PM IST

ಸಾರಾಂಶ

ಕರದಂಟು ನಗರಿ ಗೋಕಾಕದ ಯುವಕ ಸಂಜಯ ಶಶಿಕಾಂತ ಕೌಜಲಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 690ನೇ ರ್‍ಯಾಂಕ್‌ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ತರಬೇತಿ ಪಡೆಯದೇ ತಾನೇ ಸ್ವತಃ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುವ ಮೂಲಕ ಕರದಂಟು ನಗರಿ ಗೋಕಾಕದ ಯುವಕ ಸಂಜಯ ಶಶಿಕಾಂತ ಕೌಜಲಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 690ನೇ ರ್‍ಯಾಂಕ್‌ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಪದವಿ ಮುಗಿದ ಬಳಿಕ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಹುದ್ದೆ ಸಿಕ್ಕರೂ ಅದನ್ನು ನಿರಾಕರಿಸಿದ ಸಂಜಯ, ಏನೇ ಆಗಲಿ ನಾನು ನನ್ನ ತಂದೆ-ತಾಯಿ ಕಂಡ ಕನಸು ನನಸು ಮಾಡಲೇಬೇಕೆಂಬ ಅಚಲ ಛಲದಿಂದ ಪಟ್ಟ ಪರಿಶ್ರಮ ಕೊನೆಗೂ ಫಲನೀಡಿದೆ. ಸತತವಾಗಿ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರೂ ಫಲಕೊಟ್ಟಿರಲಿಲ್ಲ. ಮರಳಿ ಯತ್ನವ ಮಾಡು ಎನ್ನುವಂತೆ ಐದನೇ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗೋಕಾಕ ನಗರದಲ್ಲಿ ಪಶುವೈದ್ಯರಾಗಿರುವ ಡಾ.ಶಶಿಕಾಂತ ಕೌಜಲಗಿಯವರ ಪುತ್ರ ಸಂಜಯ ಕೌಜಲಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 690ನೇ ರ್‍ಯಾಂಕ್ ಪಡೆದು ರಾಷ್ಟ್ರಮಟ್ಟದಲ್ಲಿ ನಗರದ ಕೀರ್ತಿ ಹೆಚ್ಚಿಸಿದ್ದಾರೆ.

ಮುಂದಿನ ದಿನಮಾನಗಳಲ್ಲಿ ಬಡಜನರಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿಕೊಡುವಂತಹ ಅಧಿಕಾರಿಯಾಗಿ ಕೆಲಸ ಮಾಡುತ್ತೇನೆ, ಶ್ರದ್ಧೆ ಭಕ್ತಿಯಿಂದ ಕಾರ್ಯನಿರ್ವಹಿಸಿ ತಂದೆ-ತಾಯಿಯ ಗೌರವವನ್ನು ಹೆಚ್ಚಿಸುತ್ತೇನೆ. ಅದರ ಜೊತೆಯಲ್ಲಿ ಎರಡು ಬಾರಿ ಸೇಲಾದರೂ ಸಹ ನನ್ನ ತಾಯಿಯು ನನಗೆ ನೀಡಿದ ಧೈರ್ಯ ಮತ್ತು ಚಿಕ್ಕ ವಯಸ್ಸಿನಲ್ಲಿಯೆ ನನ್ನ ತಂದೆ ತಾಯಿಯ ಪ್ರೇರಣೆಯಿಂದ ಐಎಎಸ್‌ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದು ಸಂಜಯ ಕೌಜಲಗಿ ಹೇಳಿದರು.

ಈಗಿನ ಯುವಕರು ಒಂದು ಗುರಿ ಇಟ್ಟುಕೊಳ್ಳಬೇಕು, ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ಮಾಡುವ ಕೆಲಸದ ಬಗ್ಗೆ ಶ್ರದ್ಧೆ ಇದ್ದರೆ ಪ್ರತಿಫಲ ಸಿಕ್ಕಿ ಸಿಗುತ್ತೆ ಎಂದರು.

ಸತತ ಪ್ರಯತ್ನ ಮಾಡಬೇಕು. ಸದಾ ಜಾಗೃತರಾಗಿರಬೇಕು ಅಂದಾಗ ಮಾತ್ರ ಯಶಸ್ಸು ಖಂಡಿತ. ಅದಕ್ಕೆ ನನ್ನ ಮಗನೇ ಸಾಕ್ಷಿ. ಈ ಮೂಲಕ ನಾಡಿಗೆ ಕೀರ್ತಿ ತರುವ ಕೆಲಸ ಮಾಡಿದ್ದಾನೆಂದು ಸಂಜಯ ತಾಯಿ ಜಯಶ್ರೀ ಕೌಜಲಗಿ ಹೇಳಿದರು.