ಸಾರಾಂಶ
ವಾರಂತ್ಯದ ರಜೆಯ ಜತೆ ಹೊಸ ವರ್ಷಾಚರಣೆಗಾಗಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನಕ್ಕೆ ಅಧಿಕ ಸಂಖ್ಯೆಯ ಭಕ್ತರು ನೆರೆದಿದ್ದರು.
ಗೋಕರ್ಣ: ವಾರಂತ್ಯದ ರಜೆಯ ಜತೆ ಹೊಸ ವರ್ಷಾಚರಣೆಗಾಗಿ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿ ದೇವರ ದರ್ಶನಕ್ಕೆ ಅಧಿಕ ಸಂಖ್ಯೆಯ ಭಕ್ತರು ನೆರೆದಿದ್ದರು.
ಮಹಾಶಿವರಾತ್ರಿಯಂತೆ ಮುಖ್ಯಕಡಲ ತೀರದ ವರೆಗೆ ಭಕ್ತರ ಸರದಿ ಸಾಲು ನೆರದಿತ್ತು. ಶಾಲಾ ಮಕ್ಕಳು, ಅಯ್ಯಪ್ಪ ಮಾಲಾಧಾರಿಗಳು ಹೆಚ್ಚಾಗಿದ್ದರು. ಇದ್ದ ಸೀಮಿತ ಸೌಲಭ್ಯಗಳಲ್ಲಿಯೇ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿ ದೇವಾಲಯ ಸಿಬ್ಬಂದಿ ಶ್ರಮಿಸುತ್ತಿರುವುದು ಕಂಡು ಬಂತು.ದೇವಾಲಯದ ಉಚಿತ ಪ್ರಸಾದ ಭೋಜನ ನೀಡುವ ಅಮೃತಾನ್ನ ವಿಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪ್ರಸಾದ ಭೋಜನ ಸ್ವೀಕರಿಸಿದರು.
ಒಂದು ಅಂದಾಜಿನ ಪ್ರಕಾರ ೨೫ ಸಾವಿರಕ್ಕೂ ಹೆಚ್ಚು ಜನರು ಒಂದೇ ದಿನದಲ್ಲಿ ದೇವರ ದರ್ಶನ ಪಡೆದಿದ್ದಾರೆ ಎನ್ನಲಾಗಿದ್ದು, ಇಂತಹ ದೊಡ್ಡ ಮಟ್ಟದ ಭಕ್ತರು ಬರುವಲ್ಲಿ ಮೂಲಭೂತ ಸೌಲಭ್ಯಗಳ ಅಗತ್ಯತೆ ಇದ್ದು, ಈ ಬಗ್ಗೆ ದೇವಾಲಯ ಆಡಳಿತ ಗಮನಹರಿಸ ಬೇಕು ಎಂಬ ಮಾತು ಕೇಳಿಬರುತ್ತಿದೆ.