ಗೋಕರ್ಣ ಸಮಗ್ರ ಅಭಿವೃದ್ಧಿಗೆ ಯತ್ನ: ಕಾಗೇರಿ

| Published : May 02 2024, 12:15 AM IST

ಸಾರಾಂಶ

ಇದು ಮೋದಿಯವರ ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸಿ ದೇಶವನ್ನ ಜಗತ್ತಿನಲ್ಲಿ ಗುರುವಿನ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಚುಣಾವಣೆಯಾಗಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಗೋಕರ್ಣ: ಪುಣ್ಯಕ್ಷೇತ್ರ ಗೋಕರ್ಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಂಸದನಾಗಿ ಆಯ್ಕೆಯಾದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೇವಲ ಪ್ರವಾಸೋದ್ಯಮ ದೃಷ್ಟಿಯಲ್ಲದೇ ಧಾರ್ಮಿಕತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಮೂಲಕ ಕಾರ್ಯ ಕೈಗೊಳ್ಳುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಮಂಗಳವಾರ ಸಂಜೆ ಇಲ್ಲಿನ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಅರವತ್ತು ವರ್ಷದ ಕಾಂಗ್ರೆಸ್ ಆಡಳಿತ ಹಾಗೂ ನರೇಂದ್ರ ಮೋದಿಯವರು 10 ವರ್ಷದ ಅದ್ಭುತ ಅಭಿವೃದ್ಧಿಯ ಆಡಳಿತವನ್ನು ಜನರು ನೋಡಿದ್ದು, ಈ ಬಾರಿ ಅಭ್ಯರ್ಥಿಗಳ ನಡುವಣ ಚುಣಾವಣೆಯಲ್ಲ, ಇದು ಮೋದಿಯವರ ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸಿ ದೇಶವನ್ನ ಜಗತ್ತಿನಲ್ಲಿ ಗುರುವಿನ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಚುಣಾವಣೆಯಾಗಿದೆ ಎಂದರು.

ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಮಹಾಬಲ ಉಪಾಧ್ಯಾ, ವೇ. ಪರಮೇಶ್ವರ ಮಾರ್ಕಾಂಡೆ, ವೇ. ದತ್ತಾತ್ರೇಯ ಹಿರೇಗಂಗೆ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು.

ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಐ. ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಕಿಶನ್ ವಾಳ್ಕೆ, ಜೆಡಿಎಸ್ ಪ್ರಮುಖರಾದ ಸೂರಜ ನಾಯ್ಕ ಸೋನಿ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.