ಬಸ್ಸಲ್ಲಿ ಮೊಬೈಲ್‌ ಕದಿಯುತ್ತಿದ್ದ ಗೋಕವರಂ ಗ್ಯಾಂಗ್‌ ಸೆರೆ

| Published : Apr 13 2024, 01:47 AM IST / Updated: Apr 13 2024, 06:54 AM IST

WOMAN ARREST
ಬಸ್ಸಲ್ಲಿ ಮೊಬೈಲ್‌ ಕದಿಯುತ್ತಿದ್ದ ಗೋಕವರಂ ಗ್ಯಾಂಗ್‌ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕವರಂ ಗ್ಯಾಂಗ್‌; ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಮೊಬೈಲ್‌ ಫೋನ್‌ ಎಗರಿಸುತ್ತಿದ್ದ ಆಂಧ್ರಪ್ರದೇಶದ ಕುಖ್ಯಾತ ಗ್ಯಾಂಗ್‌. ಬಸ್‌ ಹತ್ತುವಾಗ ಅಥವಾ ಇಳಿಯುವಾಗ ಮೊಬೈಲ್‌ ಇರುವ ವ್ಯಕ್ತಿಯನ್ನು ಟಾರ್ಗೆಟ್‌ ಮಾಡುತ್ತಿದ್ದರು!

 ಬೆಂಗಳೂರು : ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಮೊಬೈಲ್‌ ಫೋನ್‌ ಎಗರಿಸುತ್ತಿದ್ದ ಆಂಧ್ರಪ್ರದೇಶದ ಕುಖ್ಯಾತ ‘ಗೋಕವರಂ ಗ್ಯಾಂಗ್‌’ನ ಆರು ಮಂದಿಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಗೋಕವರಂ ಗ್ರಾಮದ ನಿವಾಸಿಗಳಾದ ರವಿತೇಜ(30), ವೆಂಕಟೇಶ್‌20), ಬಾಲರಾಜ್‌(37), ಪೆದ್ದರಾಜ್‌(24), ರಮೇಶ್‌(25) ಹಾಗೂ ಸಾಯಿಕುಮಾರ್‌(24) ಬಂಧಿತರು. ಆರೋಪಿಗಳಿಂದ ₹30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ವೈಟ್‌ಫೀಲ್ಡ್‌ನಲ್ಲಿ ಬಿಎಂಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್‌ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಡಿಗೆಗೆ ರೂಮ್‌ ಪಡೆದು ವಾಸ:

ಆಂಧ್ರಪ್ರದೇಶದಿಂದ ತಂಡವಾಗಿ ನಗರಕ್ಕೆ ಬರುತ್ತಿದ್ದ ಆರೋಪಿಗಳು ಕಾಡುಗೋಡಿಯ ಚನ್ನಸಂದ್ರ ಮತ್ತು ಅವಲಹಳ್ಳಿಯಲ್ಲಿ ಬಾಡಿಗೆಗೆ ಎರಡು ರೂಮ್‌ ಪಡೆದಿದ್ದರು. ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್ ಏರಿ ಪ್ರಯಾಣಿಕರ ಮೊಬೈಲ್‌ ಎಗರಿಸುತ್ತಿದ್ದರು. ಬಸ್‌ ಹತ್ತುವಾಗ ಅಥವಾ ಇಳಿಯುವಾಗ ಮೊಬೈಲ್‌ ಇರುವ ವ್ಯಕ್ತಿಯನ್ನು ಟಾರ್ಗೆಟ್‌ ಮಾಡುತ್ತಿದ್ದರು. ಈ ಆರು ಮಂದಿಯೇ ಆ ವ್ಯಕ್ತಿಯನ್ನು ಸುತ್ತುವರೆದು ದಟ್ಟಣೆ-ನೂಕುನುಗ್ಗಲು ಸೃಷ್ಟಿಸುತ್ತಿದ್ದರು. ಈ ದಟ್ಟಣೆಯೊಳಗೆ ವ್ಯಕ್ತಿಯ ಮೊಬೈಲ್‌ ಎಗರಿಸಿ ಒಬ್ಬರಿಂದ ಒಬ್ಬರಿಗೆ ಕೈ ಬದಲಿಸುತ್ತಿದ್ದರು. ಬಳಿಕ ಬಸ್‌ ಮುಂದಿನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಲ್ಲರೂ ಇಳಿದು ಪರಾರಿಯಾಗುತ್ತಿದ್ದರು.

ಕದ್ದ ಮೊಬೈಲ್‌ಗಳು ರೂಮ್‌ನಲ್ಲಿ ಸಂಗ್ರಹ:

ಆರೋಪಿಗಳು ಬಿಎಂಟಿಸಿ ಬಸ್‌ಗಳಲ್ಲಿ ಕದ್ದ ಮೊಬೈಲ್ ಫೋನ್‌ಗಳನ್ನು ತಾವು ತಂಗಿದ್ದ ರೂಮ್‌ಗಳಲ್ಲಿ ಸಂಗ್ರಹಿಸುತ್ತಿದ್ದರು. ಒಮ್ಮೆಗೆ ನೂರು-ಇನ್ನೂರು ಮೊಬೈಲ್‌ ಸಂಗ್ರಹವಾದ ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ಪರಿಚಿತರ ಮುಖಾಂತರ ಮಾರಾಟ ಮಾಡಿಸಿ ಹಣ ಪಡೆಯುತ್ತಿದ್ದರು. ಬಳಿಕ ಎಲ್ಲರೂ ಸಮಾನವಾಗಿ ಹಣವನ್ನು ಹಂಚಿಕೊಳ್ಳುತ್ತಿದ್ದರು. ಪೊಲೀಸರು ತನಿಖೆ ವೇಳೆ ಆರೋಪಿಗಳ ಚನ್ನಸಂದ್ರ ಮತ್ತು ಅವಲಹಳ್ಳಿ ರೂಮ್‌ ಮೇಲೆ ದಾಳಿ ಮಾಡಿದಾಗ ವಿವಿಧ ಕಂಪನಿಗಳ ಮೊಬೈಲ್‌ ಫೋನ್‌ಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಿದ್ದಾರೆ.ಏನಿದು ಗೋಕವರಂ ಗ್ಯಾಂಗ್‌?

ಗೋಕವರಂ ಎಂಬುದು ಆಂಧ್ರಪ್ರದೇಶದ ರಾಜ್ಯದ ಒಂದು ಹಳ್ಳಿ. ಈ ಹಳ್ಳಿಯಲ್ಲಿರುವ ಬಹುತೇಕ ಗಂಡಸರು ಕಳ್ಳತನವನ್ನೇ ವೃತ್ತಿಯಾಗಿ ಸ್ವೀಕರಿಸಿದ್ದಾರೆ. ಹೆಂಡತಿ ಮಕ್ಕಳು ಮನೆಯಲೇ ಇರುತ್ತಾರೆ. ಗಂಡಸರು ಮಾತ್ರ ಕಳ್ಳತನಕ್ಕಾಗಿ ಹೊರಗೆ ಹೋಗುತ್ತಾರೆ. ಗುಂಪು ಕಟ್ಟಿಕೊಂಡು ಕಳ್ಳತಕ್ಕಾಗಿ ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ತೆರಳುತ್ತಾರೆ. ಅಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಿದ್ದು, ಕಳ್ಳತನ ಮಾಡಿಕೊಂಡು ಬಳಿಕ ಊರಿಗೆ ವಾಪಸ್‌ ಆಗುತ್ತಾರೆ. ಅಪರಾಧ ಲೋಕದಲ್ಲಿ ಈ ಕಳ್ಳರ ಗುಂಪು ಗೋಕವರಂ ಗ್ಯಾಂಗ್‌ ಎಂದೇ ಕುಖ್ಯಾತಿ ಪಡೆದಿದೆ.ಬಂಧಿತರದಲ್ಲಿ ಅಣ್ಣ-ತಮ್ಮ, ಬಾವಮೈದ!

ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿರುವ ಆರು ಮಂದಿ ಆರೋಪಿಗಳ ಪೈಕಿ ರವಿತೇಜ ಮತ್ತು ಪೆದ್ದರಾಜು ಒಡಹುಟ್ಟಿದ ಅಣ್ಣತಂಮ್ಮಂದಿರು. ಮತ್ತೊಬ್ಬ ಆರೋಪಿ ವೆಂಕಟೇಶ್‌, ರವಿತೇಜನ ಬಾವಮೈದುನ(ಪತ್ನಿಯ ತಮ್ಮ). ಈ ಮೂವರು ಹಾಗೂ ಉಳಿದ ಮೂವರು ಆರೋಪಿಗಳು ಗೋಕವರಂ ಹಳ್ಳಿ ನಿವಾಸಿಗಳೇ ಆಗಿದ್ದಾರೆ.

ಮೊಬೈಲ್‌ ಕಳೆದುಕೊಂಡಿದ್ದಲ್ಲಿ ಪೊಲೀಸರನ್ನು ಸಂಪರ್ಕಿಸಿ

ಈ ಪ್ರಕರಣದಲ್ಲಿ ಪೊಲೀಸರು ಜಪ್ತಿ ಮಾಡಿರುವ 107 ಮೊಬೈಲ್‌ಗಳ ಪೈಕಿ ಒಂದು ಮೊಬೈಲ್‌ನ ವಾರಸುದಾರರು ಪತ್ತೆಯಾಗಿದ್ದಾರೆ. ಉಳಿದ 106 ಮೊಬೈಲ್‌ಗಳ ವಾರಸುದಾರರು ಪತ್ತೆಯಾಗಿಲ್ಲ. ಬಹುತೇಕರು ದೂರು ದಾಖಲಿಸಿಲ್ಲ. ಹೀಗಾಗಿ ಮಾರ್ಚ್‌ ಮೊದಲ ವಾರದಿಂದ ಏಪ್ರಿಲ್‌ ಮೊದಲ ವಾರದ ವರೆಗೆ ಕೆ.ಆರ್‌.ಪುರ, ಕಾರುಗೋಡಿ, ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಾಗ ಮೊಬೈಲ್‌ ಕಳೆದುಕೊಂಡವರು ವೈಟ್‌ಫೀಲ್ಡ್‌ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.ನಗದು ಬಹುಮಾನ ಘೋಷಣೆ

ಪ್ರಕರಣವನ್ನು ಭೇದಿಸಿ ಕುಖ್ಯಾತ ಗೋಕವರಂ ಗ್ಯಾಂಗ್‌ನ ಆರು ಮಂದಿ ಸದಸ್ಯರನ್ನು ಬಂಧಿಸಿದ ವೈಟ್‌ಫೀಲ್ಡ್‌ ಠಾಣೆ ಪೊಲೀಸರ ಕಾರ್ಯವನ್ನು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಶ್ಲಾಘಿಸಿದರು. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರ ತಂಡಕ್ಕೆ ₹25 ಸಾವಿರ ನಗದು ಬಹುಮಾನ ಘೋಷಿಸಿದರು.