ಗೋಕಾವಿ ಶೀಘ್ರದಲ್ಲೇ ಪ್ರಸಿದ್ಧ ಯಾತ್ರಾ ಸ್ಥಳವಾಗಲಿದೆ

| Published : May 06 2025, 12:20 AM IST

ಸಾರಾಂಶ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದ ನಾಗ ತನುತರ್ಪಣ ಪ್ರಸನ್ನ ಪೂಜೆಯಲ್ಲಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಗೋಕಾಕ

700 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಗೋಕಾವಿ ನೆಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು ನವೀಕೃತವಾಗಿ ನೂತನ ಕಟ್ಟಡವು ಲೋಕಾರ್ಪಣೆಗೊಂಡಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದ ನಾಗ ತನುತರ್ಪಣ ಪೂಜಾ ಕಾರ್ಯಗಳನ್ನು ನೆರವೇರಿಸಿ ಮಾತನಾಡಿದ ಅವರು, ಏ.30ರಿಂದ ಆರಂಭಗೊಂಡಿರುವ ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಮೆರಕನಟ್ಟಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಈಗಾಗಲೇ ದೇವಸ್ಥಾನದ ಗೋಪುರ, ದ್ವಾರ ಬಾಗಿಲು ಉದ್ಘಾಟನೆಗೊಂಡಿದೆ. ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವ ಗ್ರಹ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ನಡೆದಿದೆ. ಬ್ರಹ್ಮ ಶ್ರೀ ಕೆ.ವಿ.ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರ ನೇತೃತ್ವದಲ್ಲಿ ವಿವಿಧ ರೀತಿಯ ಪೂಜಾ ಕಾರ್ಯಗಳು ನೆರವೇರುತ್ತಿವೆ. ನಮ್ಮ ಗೋಕಾವಿ ನೆಲದ ಮಹಾಲಕ್ಷ್ಮೀ ಅಮ್ಮನವರು ಕೊಲ್ಲೂರು ಮೂಕಾಂಬಿಕಾ ದೇವಿಯ ಅವತಾರದಲ್ಲಿ ಮೂರ್ತಿಯು ತಲೆ ಎತ್ತಿ ನಿಂತಿದೆ ಎಂದು ಹೇಳಿದರು.

ಇನ್ನು ಕೆಲವೇ ದಿನಗಳಲ್ಲಿ ನಮ್ಮ ಹೆಮ್ಮೆಯ ಮಹಾಲಕ್ಷ್ಮೀ ದೇವಸ್ಥಾನವು ದಕ್ಷಿಣ ಕರ್ನಾಟಕದ ಮಾದರಿಯ ಪ್ರಸಿದ್ಧ ಯಾತ್ರಾ ಸ್ಥಳವಾಗಲಿದೆ. ನಮ್ಮೆಲ್ಲರ ದೇವಿಯ ಆಶೀರ್ವಾದ ಸದಾ ಭಕ್ತ ಸಮೂಹದ ಮೇಲಿರಲಿ. ಮಳೆಯಾಗಿ ರೈತನು ಹಸನ್ಮುಖಿಯಾಗಲೀ. ಎಲ್ಲರನ್ನೂ ಮಹಾಲಕ್ಷ್ಮೀ ದೇವಿಯು ಸುಖ,ಶಾಂತಿ, ಸಮೃದ್ಧಿ, ಶಕ್ತಿ ನೀಡಿ ಕಾಪಾಡಲಿ ಎಂದು ಅವರು ಪ್ರಾರ್ಥಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗ ತನುತರ್ಪನ ಪ್ರಸನ್ನ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಪ್ರಾಯಶ್ಚಿತ ಹೋಮ ಮತ್ತು ದಿಶಾ ಹೋಮ ನೆರವೇರಿಸಿದರು. ಕೆ.ವಿ.ರಾಘವೇಂದ್ರ ಜ್ಯೋತಿಷ್ಯರ ನೇತೃತ್ವದ 30ಕ್ಕೂ ಅಧಿಕ ಅರ್ಚಕರಿಂದ ನಾಗ ದೇವತೆಗಳ ಪೂಜಾ ಕಾರ್ಯಗಳು ನಡೆದವು.

ಸುಣಧೋಳಿಯ ಶಿವಾನಂದ ಸ್ವಾಮೀಜಿ, ಯುವ ಮುಖಂಡರಾದ ಸಂತೋಷ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಸನತ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಅಭಿಷೇಕ ನಾಯಿಕ, ಖ್ಯಾತ ಉದ್ಯಮಿ ಜಯಶೀಲ ಶೆಟ್ಟಿ, ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ, ಲೆಕ್ಕ ಪರಿಶೋಧಕ ಸೈದಪ್ಪಾ ಗದಾಡಿ, ರಾಜಕೀಯ ಮುಖಂಡ ಅಶೋಕ ಪೂಜಾರಿ, ಗಣ್ಯ ವರ್ತಕ ವಿಕ್ರಮ ಅಂಗಡಿ, ಅರ್ಬನ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಕಲ್ಯಾಣಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಿಕ್ಕೋಡಿ ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಿಗೋಡೆ, ನಿರ್ದೇಶಕರಾದ ರಾಜು ಅಂಕಲಗಿ, ಎಸ್ ಎಸ್ ಢವಣ ಮುಂತಾದವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತ್ಕರಿಸಿದರು.